ಹರ್ಯಾಣ: ಕೋವಿಡ್ ಶಂಕಿತ ಮಹಿಳೆಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಜನತೆ
ಅಂಬಾಲ, ಎ.28:ಕೋವಿಡ್-19 ಶಂಕಿತ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ಹರ್ಯಾಣದ ಅಂಬಾಲದ ಹಳ್ಳಿಯೊಂದರ ನಿವಾಸಿಗಳು ಪೊಲೀಸರು ಹಾಗೂ ವೈದ್ಯರ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
60ರ ವಯಸ್ಸಿನ ಮಹಿಳೆಯೊಬ್ಬರು ಸೋಮವಾರ ಸರಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರಿಗೆ ಅಸ್ತಮಾ ಸಮಸ್ಯೆಯಿತ್ತು.
ರಾಷ್ಟ್ರದಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿದ ಚಂದಾಪುರ ಹಳ್ಳಿಯ ಜನರು ಅಂತ್ಯಕ್ರಿಯೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ವೈದ್ಯರ ನಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿ ಪ್ರತಿಭಟನಾನಿರತ ಜನರನ್ನು ಚದುರಿಸಿದರು. ಜನರು ಚದುರಿದ ಬಳಿಕ ಮಹಿಳೆಯ ಅಂತ್ಯಸಂಸ್ಕಾರ ನಡೆಸಲಾಯಿತು.
ಮಹಿಳೆಯ ಕೊರೋನ ವೈರಸ್ ಪರೀಕ್ಷೆಯ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಮಹಿಳೆಗೆ ಅಸ್ತಮಾದ ಸಮಸ್ಯೆಯಿತ್ತು. ಸೋಮವಾರ ಮಧ್ಯಾಹ್ನ ಉಸಿರಾಡಲು ಕಷ್ಟಪಡಲಾರಂಭಿಸಿದರು. ಚಿಕಿತ್ಸೆ ನಡೆಯುತ್ತಿದ್ದಾಗಲೇ ಮಹಿಳೆ ಮೃತಪಟ್ಟರು. ಕೋವಿಡ್-19 ಪರೀಕ್ಷೆಗಾಗಿ ಮಹಿಳೆಯಿಂದ ಸ್ಯಾಂಪಲ್‌ನ್ನು ಸಂಗ್ರಹಿಸಿದ್ದೇವೆ. ಎಲ್ಲ ಪ್ರಕ್ರಿಯೆ ಬಳಿಕ ಮಹಿಳೆಯ ಮೃತದೇಹವನ್ನು ಜಿಲ್ಲಾಡಳಿತಕ್ಕೆ ನೀಡಿದ್ದೇವೆ. ಹಳ್ಳಿಯ ಜನರು ಅನಗತ್ಯವಾಗಿ ಅಂತ್ಯಕ್ರಿಯೆಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ ಎಂದು ಸರಕಾರಿ ಆಸ್ಪತ್ರೆಯ ಸರ್ಜನ್ ಡಾ.ಕುಲದೀಪ್ ಸಿಂಗ್ ಹೇಳಿದ್ದಾರೆ.