ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕವಾಗುತ್ತಿದೆ ಡೆಂಗ್ ಹಾವಳಿ: 110 ಪ್ರಕರಣಗಳು ದೃಢ

ಬಳ್ಳಾರಿ, ಎ. 27: ಕೊರೋನ ಮಧ್ಯೆ ಈ ಬಾರಿ ಡೆಂಗ್ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ವರದಿಯಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ಸಹಾಯಕ ಆಯುಕ್ತರು, ತಹಶೀಲ್ದಾರರು, ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಅವರು ಮಾತನಾಡುತ್ತಿದ್ದರು.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಸಂಶಯಾಸ್ಪದ 658 ಪ್ರಕರಣಗಳಿದ್ದು, 12 ಪಾಸಿಟಿವ್ ಎಂದು ದೃಢಪಟ್ಟಿದ್ದವು. ಈ ವರ್ಷ 1425 ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು, 110 ಪಾಸಿಟಿವ್ ಎಂದು ದೃಢೀಕರಿಸಲಾಗಿದ್ದು, ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿವರಿಸಿದ ಡಿಸಿ ನಕುಲ್, ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ, ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ ಹಾಗೂ ಲಾರ್ವ ನಾಶಪಡಿಸಿ ಎಂದು ಸೂಚಿಸಿದರು.
ಕೊರೋನ ಸಂದರ್ಭದಲ್ಲಿ ಡೆಂಗ್ ಬಗ್ಗೆ ಯಾವುದೇ ರೀತಿಯ ಉದಾಸೀನ ತೊರದೇ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಜೊತೆಗೆ ತಾಲೂಕು ಆಡಳಿತಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದ ಅವರು ಡೆಂಗ್ ಗೆ ಸರಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳು ಸಹ ಚಿಕಿತ್ಸೆ ಕೊಡಬೇಕು ಎಂದರು.
ಕಂಟೈನ್ಮೆಂಟ್ ಝೋನ್ ಸೇರಿದಂತೆ ಎಲ್ಲ ವಲಯಗಳ ಗರ್ಭೀಣಿ ಮಹಿಳೆಯರು, ಕ್ಷಯರೋಗ, ಎಚ್‌ಐವಿ, ಡಯಾಲಿಸಸ್, ವಯೋವೃದ್ಧರ ಗೃಹಗಳು ಸೇರಿದಂತೆ ದುರ್ಬಲ ಗುಂಪುಗಳ ಸಮೀಕ್ಷೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಲಾಕ್‌ಡೌನ್ ಸಡಿಲಿಕೆ ಕುರಿತು ತಹಶೀಲ್ದಾರರು, ಎಸಿಗಳಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸೂಚನೆ ನೀಡಿದ ಡಿಸಿ ನಕುಲ್, ಕೃಷಿ ಚಟುವಟಿಕೆ ಮತ್ತು ಸರಕು ಸಾಗಾಣಿಕೆ, ಗ್ರಾಮ ಪಂಚಾಯತ್ ಗಳಲ್ಲಿ ಕೈಗೊಳ್ಳಲಾಗುವ ನರೇಗಾ ಕೆಲಸಗಳಿಗೆ, ರಾಜ್ಯ ಮತ್ತು ಅಂತರ್‌ರಾಜ್ಯ, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗಳಿಗೆ ಹೋಗುವ ಅಗತ್ಯವಸ್ತುಗಳ ವಾಹನ ಸರಬರಾಜು ಮಾಡುವ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದರು.
ಅಲ್ಲದೇ ಹೋಟಲ್‌ಗಳಿಗೆ ಪಾರ್ಸೆಲ್ ಮಾತ್ರ ಅವಕಾಶವಿದೆ. ಬುಕ್ ಸ್ಟಾಲ್, ಎಲೆಕ್ಟ್ರಿಕಲ್ ಶಾಪ್ ಅಂದರೆ ಬಲ್ಪು, ವೈರ್ ಈ ಹಿಂದೆ ಅಗತ್ಯಸೇವೆ ಎಂದು ಪರಿಗಣಿಸಿದವು ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ ಎಂದು ವಿವರಿಸಿದ ಅವರು, ಲಾಡ್ಜ್ ಗಳಿಗೆ ನಿರ್ಬಂಧವಿದೆ. ಬಸ್ಸು, ಆಟೋ, ಟ್ಯಾಕ್ಸಿಗಳಿಗೆ ಅಂತರ್ ಜಿಲ್ಲೆ, ಅಂತರ್ ರಾಜ್ಯ ನಿರ್ಬಂಧವಿದೆ. ಶಾಲಾ-ಕಾಲೇಜಿಗೆ ರಜೆ ನೀಡಲಾಗಿದ್ದು, ಯಾವುದೇ ರೀತಿಯ ಧಾರ್ಮಿಕ ಜಾತ್ರೆ, ಸಭೆ, ಸಮಾರಂಭಗಳಿಗೆ ಹಮ್ಮಿಕೊಳ್ಳುವಂತಿಲ್ಲ, ಯಾರಾದರೂ ಮೃತನಾದರೆ 20 ಜನಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದರು.
ಜನರು ಮನೆಯಲ್ಲಿಯೇ ಇರುವುದರ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜನಾರ್ಧನ್ ಮಾತನಾಡಿ, ಈ ಬಾರಿ ಡೆಂಗ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ವರದಿಯಾಗಿದ್ದು, ಆತಂಕಪಡುವ ಸಂಗತಿ. ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಮತ್ತು ಲಾರ್ವ ಉತ್ಪತ್ತಿ ನಾಶಪಡಿಸಬೇಕು ಎಂದರು.
ಕೆರೆ-ಕಟ್ಟೆಗಳಿಗೆ ಲಾರ್ವಾಗಳು ತಿನ್ನುವ ಗ್ಯಾಂಬಿಷಿಯಾ ಮತ್ತು ಗಪ್ಪಿ ಮೀನುಗಳನ್ನು ಬಿಡಬೇಕು ಮತ್ತು ಫಾಗಿಂಗ್ ಕಟ್ಟುನಿಟ್ಟಾಗಿ ಮಾಡಬೇಕು ಎಂದರು.
ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿ, ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡುಬರುವ ಡೆಂಗ್ ಪ್ರಕರಣಗಳು ಈ ಬಾರಿ ಬಹುಬೇಗ ಕಂಡುಬಂದಿವೆ ಎಂದರು. ಡೆಂಗ್ ಮತ್ತು ಚಿಕನ್‌ಗುನ್ಯಾ ಪ್ರಕರಣಗಳು ಮನೆಯ ಹಿಂಭಾಗದಲ್ಲಿರುವ ತೆಂಗಿನ ಚಿಪ್ಪು, ಟೈರು, ನೀರಿನ ತೊಟ್ಟಿಗಳಲ್ಲಿ ಶೇಖರವಾಗುವ ನೀರಿನಲ್ಲಿ ವಾಸಿಸುವ ಈಡಿಸ್ ಈಜಿಪ್ಟ್ ಸೊಳ್ಳೆಯಿಂದ ಬರುತ್ತವೆ ಎಂದು ವಿವರಿಸಿದ ಅವರು, ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿ ಈ ಡೆಂಗ್ ಮತ್ತು ಚಿಕನ್‌ಗುನ್ಯಾ ಕುರಿತು ಅರಿವು ಮೂಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿರುವ ಚರಂಡಿಗಳನ್ನು ಸ್ವಚ್ಛವಾಗಿಡಬೇಕು ಮತ್ತು ಅವುಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ, ಪಾಲಿಕೆ ಆಯುಕ್ತೆ ತುಷಾರಮಣಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳು ಇದ್ದರು.







