ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿರುವವರಿಗೆ ದಿನನಿತ್ಯ ಅನ್ನ ಬಡಿಸುತ್ತಿರುವ ವಿಠಲ್ ಕುಡ್ವ
ಈ ಮಾನವೀಯ ಸೇವೆಗೆ ಕಾಪ್ರಿಗುಡ್ದ ಮಸೀದಿ ಖತೀಬ್ ರಿಂದ 1 ಕ್ವಿಂಟಾಲ್ ಅಕ್ಕಿ ಕೊಡುಗೆ

ಮಂಗಳೂರು, ಎ.28: ಕೊರೋನ ಲಾಕ್ ಡೌನ್ ನಿಂದ ನಿರಾಶ್ರಿತರಾಗಿ ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿರುವ ಸಹಸ್ರಾರು ಅಸಂಘಟಿತ ಕೂಲಿ ಕಾರ್ಮಿಕರು, ಬೀದಿಬದಿಯ ಬಿಕ್ಷುಕರಿಗೆ ಪ್ರತಿನಿತ್ಯ ಡೊಂಗರಕೇರಿಯ ಸಾಮಾಜಿಕ ಕಾರ್ಯಕರ್ತ ಎಂ.ವಿಠಲ್ ಕುಡ್ವ ಹಾಗೂ ತಂಡ ಸ್ವತಃ ಅನ್ನ ಪದಾರ್ಥ ಬೇಯಿಸಿ ಊಟದ ವ್ಯವಸ್ಥೆ ಕಲ್ಪಿಸುತ್ತಿದೆ. ಈ ಮಾನವೀಯ ಸೇವೆಯನ್ನು ಅರಿತು ನಗರದ ಕಾಪ್ರಿಗುಡ್ದ ಮಸೀದಿಯ ಖತೀಬ್ ಮೌಲಾನಾ ಮುಹಮ್ಮದ್ ಮುಶ್ತಾಕ್ ಮದನಿ ಒಂದು ಕ್ವಿಂಟಾಲ್ ಅಕ್ಕಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ನೇತೃತ್ವದಲ್ಲಿ ಅವರು ಆಹಾರ ತಯಾರಿಕಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಅಕ್ಕಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ರಹೀಂ ಉಚ್ಚಿಲ್, ಜಾತಿ, ಧರ್ಮ ನೋಡದೆ ಹಸಿದವನ ಹಸಿವನ್ನು ಮಾತ್ರ ನೋಡಿ ಸ್ಪಂದಿಸುವ ಕುಡ್ವರವರ ಸೇವೆ ಶ್ಲಾಘನೀಯ. ಇದಕ್ಕೆ ಧಾರ್ಮಿಕ ಪಂಡಿತರು ಕೈ ಜೋಡಿಸುವ ಮೂಲಕ ದಯೆಯೇ ಧರ್ಮದ ಮೂಲ ಎಂಬ ಮಾತಿಗೆ ಹೆಚ್ಚು ಮಹತ್ವ ಬರುವಂತೆ ಮಾದರಿಯ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಕಾರ್ಪೊರೇಟರ್ ಚಂದ್ರಕಾಂತ್, ಸಾಮಾಜಿಕ ಕಾರ್ಯಕರ್ತ ಹಬೀಬ್ ಖಾದರ್ ಕಾಪ್ರಿಗುಡ್ದ, ಮುಹಮ್ಮದ್ ಬಾತಿಶ್ ಅಜಿಲಮೊಗರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








