ರೈತರ ಸಂಕಷ್ಟದ ಬಗ್ಗೆ ವಿಡಿಯೋ ಮೂಲಕ ವಿವರಿಸಿದ ಈರುಳ್ಳಿ ಬೆಳೆದ ಮಹಿಳೆ: ಸ್ಪಂದಿಸಿದ ಸಿಎಂ ಬಿಎಸ್‌ವೈ

ಚಿತ್ರದುರ್ಗ, ಎ.28: ಈರುಳ್ಳಿ ಬೆಳೆದು ಮಾರುಕಟ್ಟೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ ಹಿರಿಯೂರು ತಾಲೂಕಿನ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಮುಖ್ಯಮಂತ್ರಿ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ರೈತ ಮಹಿಳೆ ವಸಂತ ತಾನು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲಾತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಮಹಿಳೆಯ ವಿಡಿಯೋ ವೀಕ್ಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮಹಿಳೆಗೆ ಕರೆ ಮಾಡಿ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವ ಬಗ್ಗೆ ಆಭಯ ನೀಡಿದ್ದಾರೆ.
ಮಹಿಳೆಗೆ ಕರೆ ಮಾಡಿದ ಮುಖ್ಯಮಂತ್ರಿ, ಸಂಕಷ್ಟದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಕೂಡಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ಬಹಳ ಬುದ್ದವಂತೆ ಇದ್ದೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಳಿಕ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ, ಕೂಡಲೇ ಆ ಹಳ್ಳಿಗೆ ಭೇಟಿ ನೀಡಿ ಆಕೆಯ ಕಷ್ಟ ಆಲಿಸುವಂತೆ ಸೂಚನೆ ನೀಡಿದ್ದಾರೆ. ಮಹಿಳೆ ಹಾಗೂ ಇತರ ರೈತರು ಬೆಳೆದ ಈರುಳ್ಳಿ ಸಂಬಂಧ ಅವರಿಗೆ ತೊಂದರೆಯಾಗಿದ್ದರೆ ಕೂಡಲೇ ಸರಕಾರದ ವತಿಯಿಂದ ಈರುಳ್ಳಿ ಖರೀದಿ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲೇನಿದೆ ?
ಕೊರೋನ ವೈರಸ್ ನಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದ್ದರೂ ರೈತರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಧಾನಿಯಿಂದ ಹಿಡಿದು ದೇಶ ಕಾಯುವ ಸೈನಿಕ ಕೂಡ ತಿನ್ನೋದು ರೈತ ಬೆಳೆದ ಬೆಳೆಯನ್ನೇ. ಲಾಕ್‌ಡೌನ್ ಆದರೂ ಯಾರೂ ಹಸಿವಿನಿಂದ ಕುಳಿತಿಲ್ಲ. ಎಲ್ಲರೂ ತಿನ್ನುತ್ತಿದ್ದಾರೆ. ಆದರೆ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಸರಿಯಾದ ಬೆಲೆ ಸಿಗದೆ ಸಂಕಷ್ಟದಲ್ಲಿದ್ದಾರೆ. ಒಂದು ಚೀಲ ಈರುಳ್ಳಿಗೆ 250-300 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಆದರೆ 1 ಚೀಲ ಈರುಳ್ಳಿ ಬೆಳೆಯಲು ಕನಿಷ್ಠ 500-600 ರೂ. ಖರ್ಚಾಗತ್ತದೆ. ಆದರೆ, ಮಾರುಕಟ್ಟೆಯಲ್ಲಿ ನಮ್ಮ ಬೆಳೆಗೆ ಬೆಲೆಯೇ ಇಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.







