ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆಗೆ ಸಹಾಯವಾಣಿ ಪ್ರಾರಂಭಿಸಿದ ಹೈಕೋರ್ಟ್

ಬೆಂಗಳೂರು, ಎ.28: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೋರ್ಟ್‍ಗಳ ಕಲಾಪ ಸ್ಥಗಿತಗೊಂಡ ಹಿನ್ನೆಲೆ ಹೈಕೋರ್ಟ್ ಸಹಾಯವಾಣಿ ಪ್ರಾರಂಭಿಸಿದ್ದು, ಇ-ಫೈಲಿಂಗ್ ಹಾಗೂ ವಿಡಿಯೋ ಕಾನ್ಫರೆನ್ಸ್ ಅರ್ಜಿ ವಿಚಾರಣೆಗಾಗಿ ಸಹಾಯವಾಣಿ ತೆರೆಯಲಾಗಿದೆ.
ಇ-ಫೈಲಿಂಗ್ ಮೂಲಕ ತುರ್ತು ಅರ್ಜಿಗಳನ್ನು ದಾಖಲಿಸಲು ಹಾಗೂ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ನಡೆಸಲು ಹೆಲ್ಪ್ ಲೈನ್ ನೆರವಾಗಲಿದೆ. ಹೈಕೋರ್ಟ್ ಸಹಾಯವಾಣಿ ಮೂಲಕ ವಕೀಲರು, ಪಾರ್ಟಿ ಇನ್ ಪರ್ಸನ್ಸ್ ಮತ್ತು ವ್ಯಾಜ್ಯದಾರರಿಗೆ ಅಗತ್ಯ ವಿಚಾರ, ಮಾಹಿತಿ ಮಾರ್ಗದರ್ಶನ ಪಡೆದುಕೊಳ್ಳಬಹುದಾಗಿದೆ.
ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಹೆಲ್ಪ್ ಲೈನ್ ಪ್ರಾರಂಭಿಸುವಂತೆ ಸುಪ್ರೀಂಕೋರ್ಟ್, ಎ.6ರಂದು ಆದೇಶ ಹೊರಡಿಸಿತ್ತು. ಸದ್ಯ ಹೈಕೋರ್ಟ್, ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ನ್ಯಾಯಪೀಠಗಳಲ್ಲಿ ಸಹಾಯವಾಣಿ ಆರಂಭಿಸಿದೆ.
ಅರ್ಜಿ ಸಲ್ಲಿಸುವವರು ಬೆಂಗಳೂರು ಪ್ರಧಾನಪೀಠ-14620, ಧಾರವಾಡ ನ್ಯಾಯಪೀಠ-14621, ಕಲಬುರಗಿ ನ್ಯಾಯಪೀಠ-14622 ಸಹಾಯವಾಣಿಗೆ ಕೋರ್ಟ್ ಕಚೇರಿ ಸಮಯದಲ್ಲಿ ಕರೆ ಮಾಡಬೇಕು ಎಂದು ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಪ್ರಕಟಣೆ ಹೊರಡಿಸಿದ್ದಾರೆ.







