ಬೆಳಗಾವಿ: ಸಿಆರ್‍ಪಿಎಫ್ ಯೋಧ ಸಚಿನ್ ಸಾವಂತ್‍ಗೆ ಜಾಮೀನು ಮಂಜೂರು
ವೈರಲ್ ಆಗಿತ್ತು ಕೈಗೆ ಕೋಳ ತೊಡಿಸಿದ್ದ ಫೋಟೋ

ಬೆಳಗಾವಿ, ಎ.28: ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿದ್ದ ಸಿಆರ್‍ಪಿಎಫ್ ಯೋಧ ಸಚಿನ್ ಸಾವಂತ್‍ಗೆ ಚಿಕ್ಕೋಡಿ 1ನೆ ಜೆಎಂಎಫ್‍ಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಕುರಿತು ಸಚಿನ್ ಸಾವಂತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಚಿಕ್ಕೋಡಿ ಜೆಎಂಎಫ್‍ಸಿ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಎ.23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸಚಿನ್ ತಮ್ಮ ಮನೆಯ ಬಳಿ ಮಾಸ್ಕ್ ಹಾಕದೇ ಓಡಾಡುತ್ತಿದ್ದರೆಂದು ಪೇದೆಯೊಬ್ಬರು ಪ್ರಶ್ನಿಸಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಯೋಧನ ಮಧ್ಯೆ ಗಲಾಟೆ ನಡೆದಿತ್ತು. ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸಚಿನ್ ಅವರ ಬಂಧನವಾಗಿತ್ತು.
ಬಳಿಕ ಯೋಧನ ಕೈಗೆ ಕೋಳ ಹಾಕಿ ತೊಡಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ತನಿಖೆ ನಡೆಸಲು ಡಿಜಿಪಿ ಪ್ರವೀಣ್ ಸೂದ್ ಈಗಾಗಲೇ ಆದೇಶ ನೀಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರು ಯೋಧ ಸಚಿನ್ ಅವರ ಪ್ರಕರಣವನ್ನು ತನಿಖೆಗೆ ಒಳಪಡಿಸಿ ಎಂದು ಸಿಎಂ ಹಾಗೂ ಗೃಹ ಸಚಿವರಲ್ಲಿ ಮನವಿ ಮಾಡಿದ್ದರು.





