ಕೊರೋನ ವೈರಸ್ ಗೆ ಪ್ಲಾಸ್ಮಾ ಥೆರಪಿ ಸೂಕ್ತ ಚಿಕಿತ್ಸೆ ಎನ್ನುವುದು ಇನ್ನೂ ಸಾಬೀತಾಗಿಲ್ಲ: ಆರೋಗ್ಯ ಸಚಿವಾಲಯ

ಹೊಸದಿಲ್ಲಿ, ಎ.28: ಕೊರೋನ ವೈರಸ್ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿಯನ್ನು ಕ್ರಮಬದ್ಧ ಚಿಕಿತ್ಸೆ ಎಂದು ಪರಿಗಣಿಸಬಾರದು. ಇದರ ಪರಿಣಾಮತ್ವ ಸಾಬೀತುಪಡುವವರೆಗೆ ಇದನ್ನು ಸಂಶೋಧನೆ ಮತ್ತು ಪ್ರಯೋಗಾತ್ಮಕ ನೆಲೆಯಲ್ಲಿ ಮಾತ್ರ ಬಳಸಬೇಕು ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.
ಪ್ಲಾಸ್ಮಾ ಥೆರಪಿಯನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಪ್ರಾಣಕ್ಕೇ ಅಪಾಯ ಉಂಟಾಗಬಹುದು ಎಂದು ಸರಕಾರ ಹೇಳಿದೆ. ಪ್ಲಾಸ್ಮಾ ಥೆರಪಿಯನ್ನು ಪ್ರಾಯೋಗಿಕ ಪರೀಕ್ಷೆಯಾಗಿ ನಿರ್ವಹಿಸಲಾಗುತ್ತಿದ್ದು, ಇದು ಸೂಕ್ತ ಚಿಕಿತ್ಸೆ ಎಂದು ಸಾಬೀತಾಗಿಲ್ಲ. ಪ್ರಾಯೋಗಿಕ ಪರೀಕ್ಷೆಯ ಹಂತದಲ್ಲಿರುವುದರಿಂದ ಸೂಕ್ತವಾಗಿ ನಿರ್ವಹಿಸದಿದ್ದರೆ ಜೀವಕ್ಕೇ ಅಪಾಯವಾಗಬಹುದು ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಹೇಳಿದ್ದಾರೆ.
ದೇಶದ ಅಗ್ರ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) , ಪ್ಲಾಸ್ಮಾ ಥೆರಪಿಯ ಪರಿಣಾಮ ತಿಳಿದುಕೊಳ್ಳಲು ಸಂಶೋಧನಾ ಅಧ್ಯಯನ ನಡೆಸುತ್ತಿದೆ. ಅದುವರೆಗೆ ಪರೀಕ್ಷಾ ಪ್ರಯೋಗದಲ್ಲಿ ಮಾತ್ರ ಪ್ಲಾಸ್ಮಾ ಥೆರಪಿಯನ್ನು ಬಳಸುವಂತೆ ವೈದ್ಯರಿಗೆ ಸಲಹೆ ನೀಡಲಾಗಿದೆ ಎಂದವರು ಹೇಳಿದ್ದಾರೆ.
ಕೊರೋನ ವೈರಸ್ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯ ದೇಹದಿಂದ ಪ್ಲಾಸ್ಮಾವನ್ನು ತೆಗೆದು ಸೋಂಕಿತ ವ್ಯಕ್ತಿಯ ದೇಹಕ್ಕೆ ಸೇರಿಸುವುದನ್ನು ಪ್ಲಾಸ್ಮಾ ಥೆರಪಿ ಎಂದು ಹೆಸರಿಸಲಾಗಿದೆ. ಗುಣಮುಖನಾದ ವ್ಯಕ್ತಿಯ ದೇಹದಲ್ಲಿರುವ ಪ್ಲಾಸ್ಮಾವು ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ(ಆ್ಯಂಟಿಬಾಡಿ)ವನ್ನು ಹೊಂದಿರುವುದರಿಂದ ರೋಗಿಗಳಲ್ಲಿ ಪ್ರತಿರಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಭಾರತದಲ್ಲಿ ಈಗ ವೆಂಟಿಲೇಟರ್ ವ್ಯವಸ್ಥೆಯಲ್ಲಿರುವ ಕೊರೋನ ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿಯನ್ನು ಬಳಸಲಾಗುತ್ತಿದೆ. ದೇಶದ ಹಲವು ವೈದ್ಯಕೀಯ ಕೇಂದ್ರಗಳು ಈಗ ಕೊರೋನ ಸೋಂಕು ಗುಣಮುಖರಾಗಿರುವ ವ್ಯಕ್ತಿಗಳಿಂದ ಪ್ಲಾಸ್ಮಾವನ್ನು ಶೇಖರಿಸಿಡುವ ಪ್ರಕ್ರಿಯೆ ಆರಂಭಿಸಿವೆ.







