ಹಸಿರು ವಲಯಗಳಲ್ಲಿ ಲಾಕ್ಡೌನ್ ಸಡಿಲಿಕೆ: ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ ರಾಜ್ಯ ಸರಕಾರ
ದ.ಕ ಸೇರಿ ಎಂಟು ಜಿಲ್ಲೆಗಳಲ್ಲಿ ಮೇ 3ರವರೆಗೆ ಯಥಾಸ್ಥಿತಿ

ಬೆಂಗಳೂರು, ಎ.28: ರಾಜಧಾನಿ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋವಿಡ್-19 ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲದೆ ಮೇ 3ರವರೆಗೆ ಮುಂದುವರಿಯಲಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಆದರೆ, ಹಸಿರು ವಲಯಗಳಾದ ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳು, ಮುನ್ಸಿಪಲ್ ಕಾರ್ಪೋರೇಷನ್‍ಗಳು ಹಾಗೂ ಮುನ್ಸಿಪಾಲಿಟಿಗಳ ವ್ಯಾಪ್ತಿಯ ಹೊರಗೆ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅವಕಾಶ(ರಾಮನಗರ ಜಿಲ್ಲೆ ಹೊರತುಪಡಿಸಿ) ಕಲ್ಪಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.
ವಿಶೇಷ ಆರ್ಥಿಕ ವಲಯ ಹಾಗೂ ರಫ್ತು ಸಂಬಂಧಿತ ಘಟಕಗಳು, ಕೈಗಾರಿಕೆ ಎಸ್ಟೇಟ್‍ಗಳು, ಕೈಗಾರಿಕೆ ಟೌನ್‍ಶಿಪ್‍ಗಳು ಕಾರ್ಯನಿರ್ವಹಿಸುವಾಗ ತಮ್ಮ ಸಿಬ್ಬಂದಿಗಳು ಕಾರ್ಯಕ್ಷೇತ್ರದ ಆವರಣದೊಳಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಕಾರ್ಮಿಕರು ತಮ್ಮ ಕೆಲಸದ ಸ್ಥಳಕ್ಕೆ ತೆರಳಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿಕೊಂಡು ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಯಡಿ ನೋಂದಣಿಯಾಗಿರುವ ಅಂಗಡಿಗಳು, ವಸತಿ ಸಂಕೀರ್ಣಗಳು ಹಾಗೂ ಮಾರುಕಟ್ಟೆ ಸಂಕೀರ್ಣಗಳಲ್ಲಿ ಇರುವ ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ಮಲ್ಟಿ ಬ್ರಾಂಡ್ ಹಾಗೂ ಸಿಂಗಲ್ ಬ್ರಾಂಡ್ ಮಾಲ್‍ಗಳು ತೆರೆಯಲು ಅವಕಾಶವಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳು ಕಂಡು ಬರದೆ ಇರುವಂತಹ ತಾಲೂಕುಗಳಲ್ಲಿ ಅಂಗಡಿಗಳು ಹಾಗೂ ಕೈಗಾರಿಕೆಗಳನ್ನು ತೆರೆಯುವ ಕುರಿತು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮುಖ್ಯಕಾರ್ಯದರ್ಶಿ ತಿಳಿಸಿದ್ದಾರೆ.







