ಉಡುಪಿ: ಮತ್ತೆ 14 ಮಂದಿ ಐಸೋಲೇಷನ್ ವಾರ್ಡಿಗೆ ದಾಖಲು
ಉಡುಪಿ, ಎ.28: ನೋವೆಲ್ ಕೊರೋನ ವೈರಸ್ (ಕೋವಿಡ್-19)ನ ಗುಣಲಕ್ಷಣಗಳನ್ನು ಹೊಂದಿರುವ ಇನ್ನೂ 14 ಮಂದಿ ಮಂಗಳವಾರ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಸೇರ್ಪಡೆಗೊಂಡವರಲ್ಲಿ 9 ಮಂದಿ ಪುರುಷರು ಹಾಗೂ ಐವರು ಮಹಿಳೆಯರು ಸೇರಿದ್ದಾರೆ. ಇವರಲ್ಲಿ ಏಳು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರೆ, ಇಬ್ಬರು ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇನ್ನಿಬ್ಬರು ಶೀತಜ್ವರದ ಬಾಧೆಗೆ ಇಂದು ದಾಖಲಾಗಿದ್ದಾರೆ. ಇಂದು 19 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, 42 ಮಂದಿ ಇನ್ನೂ ವಾರ್ಡಿನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟಾರೆಯಾಗಿ 327 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಮಂಗಳವಾರ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಇನ್ನೂ 37 ಮಂದಿಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸ ಲಾಗಿದೆ. ಇದರಲ್ಲಿ 18 ಸ್ಯಾಂಪಲ್‌ಗಳು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರದ್ದಾಗಿದೆ. ಉಳಿದಂತೆ 11 ಮಂದಿ ತೀವ್ರ ಉಸಿರಾಟದ ತೊಂದರೆಯ ವರದ್ದಾಗಿದೆ. ಉಳಿದಂತೆ ಮೂರು ಮಂದಿ ಶೀತಜ್ವರದಿಂದ ಬಳಲುತ್ತಿರುವವರ ಹಾಗೂ ಐವರು ಕೊರೋನ ಹಾಟ್‌ಸ್ಪಾಟ್‌ಗಳಿಂದ ಬಂದವರ ಸ್ಯಾಂಪಲ್‌ಗಳನ್ನು ಸಹ ಕೊರೋನ ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದವರು ತಿಳಿಸಿರು.
ಇಂದು ಒಟ್ಟು 25 ಮಂದಿಯ ಗಂಟಲು ದ್ರವದ ಪರೀಕ್ಷಾ ವರದಿ ಬಂದಿದ್ದು, ಎಲ್ಲವೂ ಸೋಂಕಿಗೆ ನೆಗೆಟಿವ್ ಆಗಿದೆ. ಹೀಗಾಗಿ ಹಿಂದಿನ 15 ಸೇರಿದಂತೆ ಒಟ್ಟು 52 ಸ್ಯಾಂಪಲ್‌ಗಳ ವರದಿ ಇನ್ನು ಬರಬೇಕಿದೆ. ಜಿಲ್ಲೆಯಿಂದ ಇದುವರೆಗೆ ಒಟ್ಟು 1105 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1058ರ ವರದಿ ಬಂದಿದ್ದು, 1050 ನೆಗೆಟಿವ್ ಹಾಗೂ ಮೂರು ಮಾತ್ರ ಪಾಸಿಟಿವ್ ಆಗಿ ಬಂದಿವೆ. ಪಾಸಿಟಿವ್ ಆಗಿದ್ದವ ರೆಲ್ಲರೂ ಚಿಕಿತ್ಸೆಯಿಂದ ಚೇತರಿಸಿಕೊಂಡು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ಇಂದು 87ಮಂದಿಯನ್ನು ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3434 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2052 (ಇಂದು 36) ಮಂದಿ 28 ದಿನಗಳ ನಿಗಾವನ್ನೂ, 2820 (68) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 534 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 38 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಏಳು ಮಂದಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.







