ಕೊರೋನದಿಂದಾಗಿ ರಾಜ್ಯದಲ್ಲಿ ನಾಲ್ಕು ಆರೋಗ್ಯ ಸಚಿವರು ಸೃಷ್ಟಿ: ಪ್ರಿಯಾಂಕ್ ಖರ್ಗೆ

ಕಲಬುರಗಿ, ಎ.28: ರಾಜ್ಯದಲ್ಲಿ ಕೊರೋನ ವೈರಸ್ ಸಂಬಂಧಿಸಿದಂತೆ ನಾಲ್ಕು ಆರೋಗ್ಯ ಸಚಿವರು ಸೃಷ್ಟಿಯಾಗಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಲ್ಕು ಮಂದಿ ಕೊರೋನ ಸಚಿವರಿದ್ದಾರೆ. ರಾಜ್ಯ ಸರಕಾರ ಕೊರೋನ ವೈರಸ್‍ಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಇಲ್ಲದೇ ಇರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನ್ಯೂಸ್ ಬುಲೆಟಿನ್ ಓದಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರಕಾರ ಪ್ರತಿ ಜಿಲ್ಲೆಗೆ ಲ್ಯಾಬ್ ತೆಗೆಯುವುದಾಗಿ ಹೇಳಿದೆ. ಆದರೆ, ಇಲ್ಲಿಯವರೆಗೆ ಆ ಕೆಲಸ ಮಾಡಿಲ್ಲ. ಕೊರೋನ ವಾರಿಯರ್ಸ್‍ಗೆ ರಕ್ಷಣೆಯಿಲ್ಲ. ಕ್ವಾಲಿಟಿ ಪ್ರಕಾರ ಪಿಪಿಇ ಕಿಟ್ ವಿತರಣೆಯನ್ನು ನೀಡಿಲ್ಲ. ಕೊರೋನ ವಾರ್ಡಿನಲ್ಲಿ ಎಸಿ ಸಹ ಹಾಕಲು ಆಗಿಲ್ಲ. ಹೀಗಾಗಿ ಬೆವರು ಬಂದು ಚಿಕಿತ್ಸೆ ನೀಡಲು ನಮಗೆ ತೊಂದೆರೆಯಿದೆ. ಅಲ್ಲಿನ ರೋಗಿಗಳಿಗೂ ಸಹ ತೊಂದರೆಯಾಗುತ್ತಿದೆ. ಕೊರೋನ ವಾರ್ಡಿನಲ್ಲಿ ಸ್ಯಾನಿಟೈಸರ್ ಸಹ ನೀಡಿಲ್ಲ. ರೋಗಿಗಳಿಗೆ ನೀಡುವ ಆಹಾರ ಸಹ ಸರಿಯಾಗಿಲ್ಲ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಇಎಸ್‍ಐ ಸಿಬ್ಬಂದಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸರಕಾರ ಕಲಬುರಗಿ ಇಎಸ್‍ಐ ಆಸ್ಪತ್ರೆಗೆ ಇಲ್ಲಿಯವರೆಗೆ ಒಂದು ರೂ. ನೀಡಿಲ್ಲ. ಈ ಬಗ್ಗೆ ಸಂಸದ ಉಮೇಶ್ ಜಾಧವ್ ಕೇಂದ್ರ ಸರಕಾರಕ್ಕೆ ಕೇಳುತ್ತಿಲ್ಲ. ಆದ್ದರಿಂದ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿ, ಆಸ್ಪತ್ರೆ ತೆರೆಯಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.







