ನಮ್ಮನ್ನು ವಾಪಾಸು ಕರೆಸಿಕೊಳ್ಳಿ : ಮಲೇಷಿಯಾದಲ್ಲಿರುವ ಮಂಗಳೂರಿನ ವಿದ್ಯಾರ್ಥಿಗಳ ಭಿನ್ನಹ

ಮಂಗಳೂರು : ಕೊರೋನ ವೈರಸ್ ಸೋಂಕಿನಿಂದಾಗಿ ಹೊರ ನಾಡು, ಮಾತ್ರವಲ್ಲದೆ, ಹೊರ ದೇಶಗಳಲ್ಲಿ ಅತಂತ್ರರಾಗಿರುವ ಕನ್ನಡಿಗರು ತಾಯ್ನಡಿಗೆ ಮರಳಲು ಹಾತೊರೆಯುತ್ತಿದ್ದಾರೆ. ಈ ನಡುವೆಯೇ ಹೊರ ದೇಶಗಳಲ್ಲಿನ ವಿದ್ಯಾರ್ಥಿಗಳು ಕೂಡಾ ಜನಪ್ರತಿನಿಧಿಗಳಿಗೆ ತಮ್ಮನ್ನು ಕರೆಸಿಕೊಳ್ಳುವಂತೆ ವೀಡಿಯೋ ಮೂಲಕ ಸಂದೇಶ ಕಳುಹಿಸಿ ಭಿನ್ನವಿಸಿಕೊಳ್ಳುತ್ತಿದ್ದಾರೆ.
ಇಂಟರ್ನ್‌ಶಿಪ್‌ಗಾಗಿ ಮಲೇಶಿಯಾದಲ್ಲಿರುವ ನವೀನ್ ಮಲ್ಯ ಹಾಗೂ ಮಹಿಮಾ ಗುಪ್ತ ಎಂಬ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ಮಾನಸಿಕ ವಾಗಿಯೂ ತಾವು ಜರ್ಝರಿತವಾಗಿದ್ದು, ಭಾರತಕ್ಕೆ ತಮ್ಮನ್ನು ಕರೆಸಿಕೊಳ್ಳುವಂತೆ ವೀಡಿಯೊ ಮೂಲಕ ವಿನಂತಿಸಿದ್ದಾರೆ.
ಮಂಗಳೂರಿನ ಕೆಎಂಸಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ನವೀನ್ ಮಲ್ಯ ಮತ್ತು ಮಹಿಮಾ ಗುಪ್ತ ಅವರು ಒಂದು ತಿಂಗಳ ಸರ್ಜಿಕಲ್ ಇಂಟರ್ನ್‌ಶಿಪ್‌ಗಾಗಿ ಮಲೇಶಿಯಾದ ವೈದ್ಯಕೀಯ ಕಾಲೇಜಿಗೆ ಮಾ. 12ರಂದು ತೆರಳಿದ್ದರು. ಮಾ. 17ರಿಂದ ಮಲೇಶಿಯಾದಲ್ಲಿ ಲಾಕ್‌ಡೌನ್ ಆಗಿರುವುದರಿಂದ ಅವರು ಅಲ್ಲಿ ಇಂಟರ್ನ್‌ಶಿಪ್ ಮಾಡಲಾಗದೇ, ತಾಯ್ನಿಡಿಗೆ ವಾಪಸು ಬರಲಾದೆ ತೊಂದರೆ ಅನುಭವಿಸುತ್ತಿದ್ದಾರೆ.
‘‘ಲಾಕ್‌ಡೌನ್ ಆಗಿ ಒಂದೂವರೆ ತಿಂಗಳಾಗುತ್ತಾ ಬಂತು. ನಮಗೆ ಇಲ್ಲಿ ತುಂಬಾ ಕಷ್ಟವಾಗುತ್ತಿದೆ. ಮಾನಸಿಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಕಷ್ಟವಾಗಿದ್ದು, ಇಲ್ಲಿ ಬಾಡಿಗೆ ದರ ನೀಡಲು ಕೂಡಾ ಹೊರೆಯಾಗುತ್ತಿದೆ. ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಸರಕಾರ ಯೋಚಿಸುತ್ತಿದೆ. ನಮ್ಮನ್ನೂ ವಾಪಾಸು ಕರೆಸುವಂತೆ ನಾವು ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಮನವಿ ಮಾಡುತ್ತಿದ್ದೇವೆ. ಇದರ ಜತೆಯಲ್ಲೇ ಹಲವಾರು ಕನ್ನಡಿಗರು ಇಲ್ಲಿದ್ದಾರೆ. ಅವರಿಗೂ ಸಹಾಯ ಮಾಡಿ’’ ಎಂದು ನವೀನ್ ಮಲ್ಯ ಹಾಗೂ ಮಹಿಮಾ ಗುಪ್ತಾ ವೀಡಿಯೊ ಮೂಲಕ ಭಿನ್ನವಿಸಿಕೊಂಡಿದ್ದಾರೆ.







