ಮೇ 3ರ ಬಳಿಕ ರಾಜ್ಯದಲ್ಲಿ ಮದ್ಯದಂಗಡಿಗಳು ತೆರೆಯಲಿವೆಯೇ ?: ಅಬಕಾರಿ ಸಚಿವರು ಹೇಳಿದ್ದು ಹೀಗೆ...

ಬೆಂಗಳೂರು, ಎ.28: ದೇಶಾದ್ಯಂತ ಮೇ 3ರವರೆಗೆ ಲಾಕ್‍ಡೌನ್ ಘೋಷಣೆಯಾಗಿದ್ದು, ಆನಂತರವು ರಾಜ್ಯದಲ್ಲಿ ಮದ್ಯದಂಗಡಿಗಳು ತೆರೆಯುವುದರ ಬಗ್ಗೆ ಅಬಕಾರಿ ಸಚಿವ ಎಚ್.ನಾಗೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ಸರಕಾರವು ಮದ್ಯದಂಗಡಿಗಳನ್ನು ತೆರೆಯಲು ಪ್ರಧಾನಿ ಬಳಿ ಅನುಮತಿ ಕೋರಿತ್ತು. ಆದರೆ, ನಿನ್ನೆ ಪ್ರಧಾನಿ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದ ವೇಳೆ ಪಂಜಾಬ್ ಸರಕಾರದ ಬೇಡಿಕೆಯನ್ನು ಪ್ರಧಾನಿ ತಿರಸ್ಕರಿಸಿದರು ಎಂದರು.
ಲಾಕ್‍ಡೌನ್ ಸಂಬಂಧ ಪ್ರಧಾನ ಮಂತ್ರಿ ಕೈಗೊಳ್ಳುವ ನಿರ್ಧಾರಗಳು ನಮ್ಮ ರಾಜ್ಯಕ್ಕೂ ಅನ್ವಯವಾಗಲಿದೆ. ಆದುದರಿಂದ, ಮೇ 3ರ ನಂತರ ರಾಜ್ಯದಲ್ಲಿ ಮದ್ಯದಂಗಡಿಗಳು ತೆರೆಯಲು ಅವಕಾಶ ಸಿಗುವುದು ಅನುಮಾನ ಎಂದು ಅವರು ಹೇಳಿದರು.
ಅದಾಗ್ಯೂ, ಕೋವಿಡ್-19 ಹಿನ್ನೆಲೆಯಲ್ಲಿ ಹಸಿರು ವಲಯಗಳು ಎಂದು ಗುರುತಿಸಲ್ಪಟ್ಟಿರುವ ಸ್ಥಳಗಳಲ್ಲಿ ಮೇ 3ರ ಬಳಿಕ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಾಗೇಶ್ ಹೇಳಿದರು.







