ಕುಂದಾಪುರ: ಆಶಾ ಕಾರ್ಯಕರ್ತೆಗೆ ಜೀವಬೆದರಿಕೆ; ಇಬ್ಬರ ಬಂಧನ

ಕುಂದಾಪುರ, ಎ.28: ಕೊರೋನ ಸಂಬಂಧ ಕರ್ತವ್ಯ ನಿರತರಾಗಿದ್ದ ಆಶಾ ಕಾರ್ಯಕರ್ತೆ ಲಕ್ಷ್ಮೀ ಸಿ. ಎಂಬವರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಇಬ್ಬರನ್ನು ಕುಂದಾಪುರ ಪೊಲೀಸರು ಎ.27ರಂದು ಬಂಧಿಸಿದ್ದಾರೆ.
ಮದ್ದುಗುಡ್ಡೆ ನಿವಾಸಿ ಸಂದೀಪ ಮೇಸ್ತ ಯಾನೆ ವಿಕ್ಕಿ ಮೇಸ್ತ (30) ಹಾಗೂ ಖಾರ್ವಿಕೇರಿ ನಿವಾಸಿ ಮಹೇಶ್ ಖಾರ್ವಿ (32) ಬಂಧಿತ ಆರೋಪಿಗಳು.
ಬೆಂಗಳೂರಿನಿಂದ ಊರಿಗೆ ಬಂದಿದ್ದ ಸಂದೀಪ ಮೇಸ್ತನಿಗೆ 28 ದಿನಗಳ ಕಾಲ ಎಲ್ಲಿಗೂ ಹೊರಗೆ ಹೋಗದೇ ಮನೆಯೊಳಗೆ ಇರುವಂತೆ ಸೂಚಿಸಲಾಗಿತ್ತು. ಆದರೆ ಆತನು ಮನೆಯಲ್ಲಿ ಇರದೇ ಊರಲ್ಲಿ ತಿರುಗಾಡುತ್ತಿರುವ ಬಗ್ಗೆ ಬಂದ ದೂರಿನಂತೆ ಆಶಾ ಕಾರ್ಯಕರ್ತೆ ಎ.21ರಂದು ಮದ್ದುಗುಡ್ಡೆಗೆ ತೆರಳಿ ಪ್ರಶ್ನಿಸಿದ್ದರು. ಅದಕ್ಕೆ ಆತ ಅವರನ್ನು ಗದರಿಸಿದ್ದ ಎನ್ನಲಾಗಿದೆ.
ಎ.24ರಂದು ಸಂಜೆ ಈತ ಮಹೇಶ್ ಖಾರ್ವಿ ಜೊತೆ ಬಂದು ಲಕ್ಷ್ಮೀ ಅವರಿಗೆ ಜೀವಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಲಕ್ಷ್ಮೀ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಕುಂದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದಾರೆ.





