ಉಡುಪಿ ನಗರದಲ್ಲಿ ಹೆಚ್ಚಿದ ವಾಹನ ದಟ್ಟಣೆ: ಹಲವೆಡೆ ಟ್ರಾಫಿಕ್ ಜಾಮ್
ಉಡುಪಿ, ಎ.28: ಕೋವಿಡ್-19 ಸಂಬಂಧ ಉಡುಪಿ ಜಿಲ್ಲೆಯು ಹಸಿರು ವಲಯದತ್ತ ಹೆಜ್ಜೆ ಇರಿಸುತ್ತಿದ್ದಂತೆ ಜನ ಹೊರಗಡೆ ಬರುತ್ತಿರುವುದು ಕೂಡ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇಂದು ಉಡುಪಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾದ ಬಗ್ಗೆ ವರದಿಯಾಗಿದೆ.
ನಗರದ ಕೆ.ಎಂ.ಮಾರ್ಗ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಮಣಿಪಾಲ- ಉಡುಪಿ ರಸ್ತೆಯಲ್ಲಿ ವಾಹನ ಸಂಚಾರ ಎಂದಿಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದವು. ಬೆಳಗ್ಗೆ 7ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ದಿನಸಿ, ಬೇಕರಿ, ತರಕಾರಿ ಅಂಗಡಿಗಳು ತೆರೆದಿದ್ದವು. ಅದರೊಂದಿಗೆ ಮೆಡಿಕಲ್, ಬ್ಯಾಂಕ್, ಎಲ್‌ಐಸಿ ಕಚೇರಿ, ನಗರಸಭೆ ಕಚೇರಿ, ಆಸ್ಪತ್ರೆ ಗಳು ಕೂಡ ತೆರೆದಿರುವುದರಿಂದ ಜನ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೊರಗಡೆ ಬರುತ್ತಿದ್ದಾರೆ.
ಇದರಿಂದ ನಗರದ ಕೆಲವು ಪ್ರಮುಖ ಕಡೆಗಳಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ರಿಕ್ಷಾಗಳು ಕೂಡ ಓಡಾಟ ನಡೆಸುತ್ತಿರುವುದರಿಂದ ಕಲ್ಸಂಕ ಜಂಕ್ಷನ್‌ನಲ್ಲಿ ಉಡುಪಿ ಸಂಚಾರ ಪೊಲೀಸರು ಸುಮಾರು 20ಕ್ಕೂ ಅಧಿಕ ರಿಕ್ಷಾಗಳನ್ನು ತಪಾಸಣೆಗೆ ಒಳಪಡಿಸಿ ದರು. ಅದರಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದ ಮತ್ತು ಬಾಡಿಗೆ ನಡೆಸುತ್ತಿದ್ದ ಆರು ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲ ಗಳು ತಿಳಿಸಿವೆ.
ಯುವಕರಿಂದ ಪೊಲೀಸರಿಗೆ ಸಹಕಾರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಟಪಾಡಿ ಪೇಟೆಯಲ್ಲಿ ಬೆಳಗಿನ ಅವಧಿಯಲ್ಲಿ ಜನರು ಅವಶ್ಯಕ ವಸ್ತುಗಳ ಖರೀದಿಗಾಗಿ ಮುಗಿಬೀಳುತ್ತಿರುವುದರಿಂದ ವಾಹನಗಳ ಮತ್ತು ಜನರ ದಟ್ಟನೆ ಅಧಿಕವಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಕಟಪಾಡಿ ಏಣಗುಡ್ಡಯ್ಯ ಗರೋಡಿ ಜವನೇರ್ ತಂಡವು ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಮೈಕ್ ಮೂಲಕ ಕೊರೋನ ವೈರಸ್ ಕುರಿತ ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಈ ತಂಡ ಮಾಡುತ್ತಿದೆ. ಈ ಸಂದರ್ಭ ಕೆಲವೊಂದು ವಾಹನಗಳಿಂದ ಅಂಗಡಿಗಳಿಗೆ ಸರಬರಾಜ ಆಗಬೇಕಾದ ಅವಶ್ಯಕ ವಸ್ತುಗಳನ್ನು ಸಾಗಿಸುವಲ್ಲಿ ಈ ಯುವಕರ ಪಡೆ ಕೈಜೋಡಿಸುತ್ತಿದೆ.







