ಸುರಕ್ಷಿತ ಅಂತರ ಕಾಪಾಡದ ವಲಸೆ ಕಾರ್ಮಿಕರು : ಆರೋಗ್ಯ ತಪಾಸಣೆ ಬಳಿಕ ಊರಿಗೆ ಮರಳಿದ ಕೆಲಸಗಾರರು
ಮಂಗಳೂರು, ಎ.28: ಲಾಕ್‌ಡೌನ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ವಿವಿಧೆಡೆ ಬಾಕಿಯಾದ ವಲಸೆ ಕಾರ್ಮಿಕರನ್ನು ಮಂಗಳವಾರ ನಗರದ ಪುರಭವನದಿಂದ ಬಸ್ಸಿನಲ್ಲಿ ಕಳುಹಿಸಿಕೊಡಲಾಯಿತು. ಅದಕ್ಕೂ ಮುನ್ನ ಜಿಲ್ಲಾಡಳಿತ ಪುರಭವನದಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿತು. ಈ ವೇಳೆ ಕಾರ್ಮಿಕರು ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಕುಳಿತಿರುವುದು ಕಂಡುಬಂತು.
ಕಾವೂರು, ಕೂಳೂರು ಪರಿಸರದಲ್ಲಿ ವಾಸವಿದ್ದ ಉತ್ತರ ಕರ್ನಾಟಕದ 500ಕ್ಕೂ ಅಧಿಕ ಕಾರ್ಮಿಕರು ಲಗೇಜುಗಳೊಂದಿಗೆ ಪುರಭವನದ ಎದುರು ಜಮಾಯಿಸಿದ್ದರು. ಬಳಿಕ ಅವರನ್ನು ಪಾಲಿಕೆಯ ಆರೋಗ್ಯಾಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿದರು. ಅಲ್ಲದೆ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕೆಲವರು ಮಾಸ್ಕ್ ಧರಿಸಿದ್ದರೆ ಇನ್ನು ಕೆಲವರು ಹಾಗೆಯೇ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಕುಳಿತಿದ್ದರು.
ವಲಸೆ ಕಾರ್ಮಿಕರು ಗುಂಪಾಗಿ ಕುಳಿತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಸ್ಥಳಕ್ಕೆ ತೆರಳಿ, ಸುರಕ್ಷಿತ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವಂತೆ ಸೂಚಿಸಿ ಅವರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರ ಮನಪಾ ವ್ಯಾಪ್ತಿಯ 800ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಕಳುಹಿ ಸಲಾಗಿತ್ತು. ಇಲ್ಲಿರುವವರು ಎಲ್ಲರೂ ನಿಜವಾದ ಕಾರ್ಮಿಕರೇ ಎಂದು ಕಾರ್ಮಿಕ ಇಲಾಖೆಯ ಮೂಲಕ ಪರಿಶೀಲನೆ ನಡೆಸಿ ಬಳಿಕ ಅವರ ಊರಿಗೆ ಕಳಿಸಲಾಗಿದೆ ಎಂದರು.
ನಗರದ ಪುರಭವನದ ಬಳಿ ಜಮಾಯಿಸಿದ್ದ ವಲಸೆ ಕಾರ್ಮಿಕರನ್ನು ಬಸ್ ಮೂಲಕ ಅವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ಎಲ್ಲರಿಗೂ ಮಲೇರಿಯಾ, ಡೆಂಗ್ ಹಾಗು ಜ್ವರದ ಲಕ್ಷಣಗಳನ್ನು ಪರೀಕ್ಷೆ ಮಾಡಲಾಗಿದೆ. ಜಿಲ್ಲಾಡಳಿತ ಹಾಗು ಕಾರ್ಮಿಕ ಇಲಾಖೆ ಸಹಕಾರ ನೀಡಿದೆ. ದಾನಿಗಳ ಸಹಕಾರದಿಂದ 850 ಜನರಿಗೆ ಊಟದ ವ್ಯವಸ್ಥೆ ಮಾಡಲಾಯಿತು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.







