ಮೈಸೂರು: ಕೊರೋನ ಸೋಂಕಿತ 72 ವರ್ಷದ ವೃದ್ಧ ಗುಣಮುಖ

ಮೈಸೂರು,ಎ.28: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಇಳಿಮುಖ ಕಾಣುತ್ತಿದ್ದು, ಕೊರೋನ ಸೋಂಕಿಗೆ ತುತ್ತಾಗಿದ್ದ 72 ವರ್ಷದ ವೃದ್ಧ ಸಹ ಗುಣಮುಖರಾಗಿದ್ದು ಆಶಾದಯಕ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಮಂಗಳವಾರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಫೌಂಡೇಶನ್‍ನಿಂದ ಆರೋಗ್ಯ ಇಲಾಖೆಗೆ ನೀಡಲಾದ ಎನ್.95 ಮಾಸ್ಕ್ ಮತ್ತು ಪಿಪಿಇ ಕಿಟ್‍ಗಳನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ವೀಕರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ನಗರದ ನರ್‍ಬಾದ್‍ನ 72 ವರ್ಷದ ವೃದ್ಧರಿಗೆ ಉಸಿರಾಟದ ಸಮಸ್ಯೆ ಜೊತೆಗೆ ಬೇರೆ ಖಾಯಿಲೆಗಳು ಇತ್ತು. ಹಾಗಾಗಿ ಕೊರೋನ ಚಿಕಿತ್ಸೆ ವೈದ್ಯರಿಗೆ ಕಷ್ಟಸಾಧ್ಯವಾಗಿತ್ತು. ಆದರೆ ವೈದ್ಯರು ಹಾಗೂ ಸಿಬ್ಬಂದಿಗಳ ಅವಿರತ ಪ್ರಯತ್ನದಿಂದ ಅವರು ಗುಣಮುರಾಗಿದ್ದಾರೆ. ಅಲ್ಲದೆ 8 ಮಂದಿ ಕೊರೋನ ಸೋಂಕಿತರು ಸಹ ಗುಣಮುಖರಾಗಿದ್ದು ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು. ಈ ಮೂಲಕ ಜಿಲ್ಲಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಾಗಲಿವೆ ಎಂದು ಹೇಳಿದರು.
ಮೈಸೂರು ಜಿಲ್ಲೆ ಗ್ರೀನ್ ಝೋನ್‍ಗೆ ಬರಲು ಕೆಲವು ದಿನಗಳು ಬೇಕಾಗುತ್ತದೆ. ಮೊದಲು ಆರೆಂಜ್ ಝೋನ್‍ಗೆ ಬಂದು ನಂತರ ಗ್ರೀನ್ ಝೋನ್‍ಗೆ ಬರಬೇಕು. ಆರೆಂಜ್ ಝೋನ್‍ಗೆ ಬರಲು ಕೊರೋನ ಪ್ರಕರಣಗಳು ಸೊನ್ನೆಯಾಗಬೇಕು. ಅದಾದ ನಂತರ 20 ದಿನ ಕಾದು ನಂತರ ಗ್ರೀನ್ ಝೋನ್ ಘೋಷಣೆ ಮಾಡಲಾಗುತ್ತದೆ. ಸದ್ಯ ಪ್ರಕರಣಗಳು ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಗರ್ಭಿಣಿಯರಿಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.







