ಕೊರೋನ ಸೋಂಕಿತರ ಸಂಪರ್ಕಿತ 8 ಮಂದಿಯ ವರದಿ ನೆಗೆಟಿವ್: ಹಾಸನ ಜಿಲ್ಲಾಧಿಕಾರಿ ಗಿರೀಶ್
ಚನ್ನರಾಯಪಟ್ಟಣ ತಾಲೂಕಿನ 4 ಗ್ರಾಮಗಳಲ್ಲಿ ಸಂಚಾರ ನಿರ್ಬಂಧ

ಹಾಸನ, ಎ.28: ಕೊರೋನ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಜಿಲ್ಲೆಯ 8 ಮಂದಿಯನ್ನು ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಚನ್ನರಾಯಪಟ್ಟಣ ತಾಲೂಕಿನ 4 ಗ್ರಾಮಗಳನ್ನು ಸೀಝ್ ಮಾಡಿ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ನಾಗಮಂಗಲದಲ್ಲಿ ಕೋವಿಡ್-19 ಪಾಸಿಟಿವ್ ಎಂದು ಪತ್ತೆಯಾಗಿರುವ ಸೋಂಕಿತನೊಂದಿಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಎಲ್ಲಾ 9 ಮಂದಿಯನ್ನು ಗುರುತಿಸಲಾಗಿದ್ದು, ಅದರಲ್ಲಿ ಒಬ್ಬರು ಮುಂಬೈನಲ್ಲಿದ್ದು ಇನ್ನು ಉಳಿದ 8 ಮಂದಿಯ ಗಂಟಲು ದ್ರವ್ಯವನ್ನು ತಪಾಸಣೆ ಮಾಡಲಾಗಿದೆ. ಇದಲ್ಲದೆ 2ನೇ ಹಂತದ ಸಂಪರ್ಕ ಹೊಂದಿದ್ದ 71 ಮಂದಿಯನ್ನು ಹೋಂ ಕ್ವಾರಟೈನ್‍ನಲ್ಲಿ ಇರಿಸಿದ್ದು ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 25 ಮಂದಿಯ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಲ್ಲಾ ಪ್ರಾಥಮಿಕ ಹಾಗೂ 2ನೇ ಹಂತದ ಸಂಪರ್ಕ ಹೊಂದಿದ್ದವರನ್ನು 5ನೇ ದಿನದಂದು ಪರೀಕ್ಷೆಗೆ ಒಳಪಡಿಸಲಾಗಿದೆ. ನಿಯಾಮಾನುಸಾರ 12ನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ ನಂತರ ನೆಗೆಟಿವ್ ವರದಿ ಬಂದ ನಂತರ ಆಸ್ಪತ್ರೆ ಕ್ವಾರಟೈನ್‍ನಲ್ಲಿ ಇರುವವರನ್ನು ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪ್ರಾಥಮಿಕ ಹಂತದ ಸಂಪರ್ಕ ಹೊಂದಿದ್ದ 8 ಮಂದಿ ಚನ್ನರಾಯಪಟ್ಟಣ ತಾಲೂಕಿನ ಹೆಗ್ಗಡ್ಡಹಳ್ಳಿ, ನುಗ್ಗೆಹಳ್ಳಿ ಹೋಬಳಿಯ ಕಗ್ಗೆರೆ ಗ್ರಾಮ ಮತ್ತು ಶ್ರವಣಬೆಳಗೊಳ ಹೋಬಳಿಯ ದೇವರ ಹಳ್ಳಿ ಮತ್ತು ಶಿವಪುರ ಗ್ರಾಮಗಳಿಗೆ ಸೇರಿದ್ದು ಈ ಗ್ರಾಮಗಳ ನಡುವಿನ ಸಂಚಾರವನ್ನು ನಿಷೇಧಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೋವಿಡ್-19 ಹಾಸನ ಹಸಿರು ವಲಯದಲ್ಲಿರುವುದರಿಂದ ಸರ್ಕಾರ ಕೆಲವೊಂದು ವಿನಾಯಿತಿ ನೀಡಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ನಗರದ ಹೊರವಲಯದಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಎಲೆಕ್ಟ್ರಿಕಲ್ ಅಂಗಡಿಗಳು, ಸಿಮೆಂಟ್ ಮತ್ತು ಕಬ್ಬಿಣ ಮಾರಾಟ ಹಾಗೂ ವಾಣಿಜ್ಯ ಉದ್ದೇಶದ ಗೂಡ್ಸ್ ವಾಹನಗಳ ಸರ್ವೀಸ್ ಸೆಂಟರ್ ಗಳನ್ನು ತೆರೆಯಲು ಅನುಮತಿ ನೀಡಿದೆ. ಸಾರ್ವಜನಿಕರು ಮೇ 3ರ ವರೆಗೆ ಇದೇ ರೀತಿ ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಕೋರಿದ್ದಾರೆ.







