ಬಸವಣ್ಣರನ್ನು ಪ್ರಾಣಿಗೆ ಹೋಲಿಸಿದ್ದು ಸರಿಯಲ್ಲ: ಲಿಂಗಾಯತ ಮಹಾಸಭಾ ಆಕ್ಷೇಪ
ಬೆಂಗಳೂರು, ಎ.28: ಬಸವ ಜಯಂತಿ ಹಿನ್ನೆಲೆಯಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎತ್ತಿನ ಪೂಜೆ ಮಾಡಿ ಬಸವ ಜಯಂತಿ ಆಚರಿಸುವ ಮೂಲಕ ಬಸವಣ್ಣರನ್ನು ಒಂದು ಪ್ರಾಣಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದೆ.
ಮಾಜಿ ಸಚಿವರಾಗಿರುವ ಶಿವಶಂಕರಪ್ಪನವರು ಬಸವಣ್ಣರನ್ನು ಒಂದು ಪ್ರಾಣಿಗೆ ಹೋಲಿಸಿ ಇಡೀ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಬಸವಣ್ಣ ಎಂದರೆ ನಾಲ್ಕು ಕಾಲಿನ ಎತ್ತು ಎಂದು ತೋರಿಸಿ ಅವರ ಸಾಮಾಜಿಕ ಕ್ರಾಂತಿಗೆ ಮಸಿ ಬಳಿಯುವ ಹುನ್ನಾರದಂತೆ ಇದು ತೋರುತ್ತದೆ. ಇದರಿಂದ ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿ ತಂದಂತಾಗುತ್ತದೆ ಮತ್ತು ಲಿಂಗಾಯತರ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದಂತಾಗುತ್ತದೆ ಎಂದು ಮಹಾಸಭಾ ಆರೋಪಿಸಿದೆ.
ಪ್ರಧಾನಿ ಮೋದಿ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಅನೇಕ ಗಣ್ಯರು ಬಸವಣ್ಣರ ವಿಚಾರಧಾರೆಗಳನ್ನು ಗುಣಗಾನ ಮಾಡಿದ್ದಾರೆ. ಆದರೆ, ಶಿವಶಂಕರಪ್ಪನವರು ನಾಲ್ಕು ಕಾಲಿನ ಪ್ರಾಣಿಗೆ ಹೋಲಿಸಿ ಉದ್ಧಟತನ ಮೆರೆದಿದ್ದಾರೆ. ಈ ವರ್ತನೆಯಿಂದಾಗಿ ಎಲ್ಲ ಬಸವಾಭಿಮಾನಿಗಳಿಗೆ ತೀವ್ರ ನೋವುಂಟಾಗಿದೆ.
ವಯೋವೃದ್ಧರಾದ ಅವರ ಇಂತಹ ನೀಚ ಮತ್ತು ಅನಾಗರಿಕ ವರ್ತನೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಉಗ್ರವಾಗಿ ಖಂಡಿಸುತ್ತದೆ. ಆದುದರಿಂದ ಕೂಡಲೇ ಶಿವಶಂಕರಪ್ಪನವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಸ್.ಜಮಾದಾರ್ ಪ್ರಕಟನೆಯಲ್ಲಿ ಹೇಳಿದ್ದಾರೆ.







