ರೈತನಿಗಿಂತ ದೇಶಕ್ಕೆ ದ್ರೋಹ ಬಗೆದವರು ಮುಖ್ಯವಾದರೇ?: ಕೇಂದ್ರದ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ

ಬೆಂಗಳೂರು, ಎ. 28: ಇಡೀ ದೇಶವೇ ಆರ್ಥಿಕ ಸಂಕಷ್ಟದಲ್ಲಿರುವಾಗ ದೇಶದ ಹಿತ ನೋಡದೆ, ಮ್ಯೂಚುವಲ್ ಫಂಡ್‍ಗಳ ಹಿತ ಕಾಪಾಡಲು ಆರ್‍ಬಿಐ ಮೂಲಕ 50 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸುತ್ತಿರುವ ಕೇಂದ್ರ ಸರಕಾರದ ನಡೆ ಹಿಂದೆ ಯಾರ ಹಿತ ಅಡಗಿದೆ? ಸಾಮಾನ್ಯ ಜನರದ್ದೋ ಅಥವಾ ಉದ್ದೇಶಪೂರ್ವಕ ಸುಸ್ತಿದಾರ ಉದ್ಯಮಿಗಳದ್ದೋ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ಸಂಕಷ್ಟದಲ್ಲಿರುವವರಿಗಾಗಿ(?) ಕೇಂದ್ರ ಸರಕಾರ ಮರುಗಿದೆ! ಅವರ ಆರ್ಥಿಕ ಪುನಶ್ಚೇತನಕ್ಕಾಗಿ ಧಾರಾಳ ನೆರವು ನೀಡಿದೆ. ಈ ಕಷ್ಟಕಾಲದಲ್ಲೂ ಮಲ್ಯ, ಮೆಹುಲ್ ಚೋಕ್ಸಿ, ಸಂಜಯ್ ಜುಂಜನ್ ವಾಲ, ಬಾಬಾ ರಾಮದೇವ ಅಂತಹ ಉದ್ದೇಶಪೂರ್ವಕ ಸುಸ್ತಿದಾರರ 68 ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡಿದೆ. ಮ್ಯುಚುವಲ್ ಫಂಡ್ ಉದ್ದಿಮೆದಾರರಿಗೆ 50 ಸಾವಿರ ಕೋಟಿ ರೂ.ನೆರವು ನೀಡಲಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕೆಂಬ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಬೇಡಿಕೆಗೆ ಕೇಂದ್ರ ಸರಕಾರ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದೆ. 'ನ ಕಾವುಂಗಾ, ನಾ ಖಾನೆ ದುಂಗಾ' ಎಂದಿದ್ದ ಪ್ರಧಾನಿ ಉದ್ದಿಮೆದಾರರ ಹಿತರಕ್ಷಣೆಗೆ ಮಾತ್ರ ಮುಂದಾಗಿರುವುದು ಸರಿಯೇ?' ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಲಾಕ್‍ಡೌನ್‍ನಿಂದಾಗಿ ರೈತರು ಕೈಗೆ ಬಂದ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದಾರೆ, ಲಕ್ಷಾಂತರ ಜನರ ಉದ್ಯೋಗ ನಷ್ಟವಾಗಿದೆ, ಸಂಬಳವಿಲ್ಲದೆ ಅದೆಷ್ಟೋ ಕುಟುಂಬಗಳು ಪರಿತಪಿಸುತ್ತಿವೆ. ಕೆಲವರು ಆಹಾರವಿಲ್ಲದೇ, ಇನ್ನೂ ಕೆಲವರು ದೂರದೂರುಗಳಿಗೆ ನಡೆದು ಕೊನೆಯುಸಿರೆಳೆದಿದ್ದಾರೆ ಎಂದು ಕುಮಾರಸ್ವಾಮಿ ಗಮನ ಸೆಳೆದಿದ್ದಾರೆ.
ಈ ಸಂದರ್ಭದಲ್ಲಿ ಸರಕಾರಕ್ಕೆ ನೆನಪಾಗಬೇಕಿದ್ದು, ಪ್ರತಿನಿತ್ಯ ದುಡಿಮೆಯ ಶ್ರಮಿಕ ವರ್ಗ, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಬಡವರು. ಆದರೆ, ಕೇಂದ್ರ ಸರಕಾರಕ್ಕೆ ಕಂಡವರು ಅತಿ ಶ್ರೀಮಂತರು. ದೇಶದಲ್ಲಿ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆದಾಗ ಅವರ ಸಾಲಮನ್ನಾ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ರಾಜ್ಯ ಸರಕಾರಗಳೂ ಸಾಲಮನ್ನಾಕ್ಕೆ ಒತ್ತಾಯಿಸಿದ್ದವು. ಆದರೆ, ಆಗ ರೈತರತ್ತ ತಿರುಗಿಯೂ ನೋಡದ ಕೇಂದ್ರ ಸರಕಾರ ಈಗ ಮಲ್ಯ, ಚೋಕ್ಸಿಯಂತವರನ್ನು ಸಾಲಮನ್ನಾ ಮಾಡಿದೆ. ರೈತನಿಗಿಂತ ದೇಶಕ್ಕೆ ದ್ರೋಹ ಬಗೆದವರೇ ಕೇಂದ್ರ ಸರಕಾರಕ್ಕೆ ಮುಖ್ಯವಾದರೇ? ಇದೇನಾ ದೇಶ ಪ್ರೇಮ? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕ ಚಟುವಟಿಕೆಗಳಿಲ್ಲದೇ, ಆದಾಯವಿಲ್ಲದೇ ಸೊರಗುತ್ತಿರುವ ಈ ವೇಳೆ ರಾಜ್ಯಗಳು ಅನುದಾನ ಕೇಳುತ್ತಿರುವ ಹೊತ್ತಿನಲ್ಲಿ ಮ್ಯೂಚುವಲ್ ಫಂಡ್ ಉದ್ದಿಮೆಗಳ ನೆರವಿಗೆ ಓಡೋಡಿ ಹೋಗುವಂತಹ ತುರ್ತು ಈಗೇನಿತ್ತು? ಸರಕಾರ ಮೊದಲು ಒಕ್ಕೂಟ, ಅದರೊಳಗಿನ ನಾಗರಿಕರ ಹಿತ ಕಾಪಾಡಬೇಕಲ್ಲವೇ?’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.







