ಸೀಲ್‍ಡೌನ್‍ನಿಂದ ಮುಕ್ತಗೊಂಡ ಸಜಿಪನಡು : ಒಂದು ತಿಂಗಳಿಂದ ಕ್ವಾರಂಟೈನ್ ಆಗಿದ್ದ ಗ್ರಾಮ
ಬಂಟ್ವಾಳ ತಾಲೂಕಿನ ಮೂರು ಪ್ರದೇಶ ಕಂಟೈನ್‍ಮೆಂಟ್ ಝೋನ್
ಬಂಟ್ವಾಳ, ಎ.28: ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಲ್ಲಿ ಪ್ರಥಮ ಕೋವಿಡ್ - 19 (ಕೊರೋನ) ಸೋಂಕು ದೃಢಪಟ್ಟ ಬಂಟ್ವಾಳ ತಾಲೂಕಿನ ಸಜಿಪ ನಡು ಗ್ರಾಮ ತಿಂಗಳ ಬಳಿಕ ಸೀಲ್‍ಡೌನ್‍ನಿಂದ ಮುಕ್ತವಾಗಿದೆ. ಇದರೊಂದಿಗೆ ಒಂದು ತಿಂಗಳ ಬಳಿಕ ಗ್ರಾಮದ ಜನರಿಗೆ ಮನೆಯಿಂದ ಹೊರ ಬರಲು ಮುಕ್ತ ಅವಕಾಶ ಸಿಕ್ಕಿದೆ.
ಸಜಿಪನಡು ಗ್ರಾಮದಲ್ಲಿ ಜಾರಿಯಲ್ಲಿದ್ದ ಸೀಲ್‍ಡೌನ್ ತೆಗೆಯಲಾಗಿದ್ದರೂ ತಾಲೂಕಿನ ಮೂರು ಪ್ರದೇಶಗಳು ಕಂಟೈನ್‍ಮೆಂಟ್ ವಲಯವಾಗಿ ಮುಂದುರಿದಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆ, ತುಂಬೆ ಗ್ರಾಮದ ಕೆಲವು ಪ್ರದೇಶಗಳು, ನರಿಕೊಂಬು ಗ್ರಾಮದ ನಾಯಿಲ ಪ್ರದೇಶ ಕಂಟೈನ್‍ಮೆಂಟ್ ವಲಯಗಳಾಗಿದ್ದು ಇಲ್ಲಿ ಸೀಲ್‍ಡೌನ್ ಮುಂದುವರಿದಿದೆ.
ಗ್ರಾಮದ 10 ತಿಂಗಳ ಮಗುವಿಗೆ ಮಾರ್ಚ್ 27ರಂದು ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈರಸ್ ಹರಡುವುದನ್ನು ತಡೆಗಟ್ಟುವ ಶಿಷ್ಟಾಚಾರದಂತೆ ಗ್ರಾಮವನ್ನು ಕ್ವಾರಂಟೈನ್ ಮಾಡಲಾಗಿತ್ತು. ಮಗು ಸೋಂಕಿನಿಂದ ಗುಣಹೊಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ. ಅಲ್ಲದೆ ಮಗುವಿನ ತಂದೆ, ತಾಯಿ ಸಹಿತ ಕುಟುಂಬದ ಹಲವು ಸದಸ್ಯರು, ನೆರೆ ಮನೆಯ ಹಲವರ ಗಂಟಲ ದ್ರವ ಮಾದರಿಯನ್ನು ಕೋವಿಡ್ - 19 ಪರೀಕ್ಷೆ ಮಾಡಲಾಗಿತ್ತು. ಎಲ್ಲರದ್ದೂ ನೆಗೆಟಿವ್ ಬಂದಿತ್ತು. ಜೊತೆಗೆ ಗ್ರಾಮವನ್ನು ಕ್ವಾರಂಟೈನ್ ಮಾಡಿ ತಿಂಗಳು ದಾಟಿದ್ದರಿಂದ ಆರೋಗ್ಯ ಇಲಾಖೆಯ ವರದಿಯನ್ನು ಅನುಸರಿಸಿ ಇಲ್ಲಿನ ಸೀಲ್‍ಡೌನ್ ಅನ್ನು ಜಿಲ್ಲಾಡಳಿತ ತೆಗೆದಿದೆ.







