ಕೋವಿಡ್-19 ಪರೀಕ್ಷಾ ಕಿಟ್‌ಗಳಿಗೆ ಬೇಡಿಕೆಯನ್ನು ಭಾರತ ರದ್ದುಗೊಳಿಸಿರುವುದು ಕಳವಳಕಾರಿ: ಚೀನಾ

ಹೊಸದಿಲ್ಲಿ, ಎ.28: ಎರಡು ಚೀನಿ ಕಂಪನಿಗಳು ತಯಾರಿಸಿರುವ ಕೋವಿಡ್-19 ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷಾ ಕಿಟ್‌ಗಳ ಬಳಕೆಯನ್ನು ನಿಲ್ಲಿಸುವ ಭಾರತದ ನಿರ್ಧಾರದ ಬಗ್ಗೆ ಮಂಗಳವಾರ ತೀವ್ರ ಕಳವಳವನ್ನು ವ್ಯಕ್ತಪಡಿಸಿದ ಚೀನಾ, ಭಾರತವು ವಿಷಯವನ್ನು ನ್ಯಾಯಯುತವಾಗಿ ಬಗೆಹರಿಸಲಿದೆ ಎಂದು ಆಶಯ ವ್ಯಕ್ತಪಡಿಸಿದೆ.
ಬೇಡಿಕೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಹಣವನ್ನು ಪಾವತಿಸಲಾಗಿಲ್ಲ, ಹೀಗಾಗಿ ಚೀನಿ ಕಂಪನಿಗಳಿಂದ ದೋಷಯುಕ್ತ ಪರೀಕ್ಷಾ ಕಿಟ್‌ಗಳ ಪೂರೈಕೆಯಿಂದಾಗಿ ಭಾರತವು ಒಂದೇ ಒಂದು ರೂಪಾಯಿಯನ್ನು ಕಳೆದುಕೊಳ್ಳುತ್ತಿಲ್ಲ ಎಂದು ಸರಕಾರವು ಸೋಮವಾರ ತಿಳಿಸಿತ್ತು.
‘ಪರೀಕ್ಷಾ ಫಲಿತಾಂಶಗಳ ಮೌಲ್ಯಾಂಕನ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯ ನಿರ್ಧಾರದಿಂದ ನಮಗೆ ತೀವ್ರ ಕಳವಳವಾಗಿದೆ. ರಫ್ತು ಮಾಡಲಾಗುವ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟಕ್ಕೆ ಚೀನಾ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ’ಎಂದು ಇಲ್ಲಿಯ ಚೀನಿ ರಾಯಭಾರಿ ಕಚೇರಿಯ ವಕ್ತಾರರಾದ ಜಿ ರಾಂಗ್ ತಿಳಿಸಿದ್ದಾರೆ.
ಚೀನಾದ ಗ್ವಾಂಕ್‌ಝೌ ವಾಂಡ್ಫೊ ಬಯೊಟೆಕ್ ಮತ್ತು ಝುಹೈ ಲಿವ್‌ಝಾನ್ ಡಯಾಗ್ನಾಸ್ಟಿಕ್ಸ್ ತಯಾರಿಸಿರುವ ಪರೀಕ್ಷಾ ಕಿಟ್‌ಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಹೇಳಿರುವ ಐಸಿಎಂಆರ್, ಅವುಗಳ ಬಳಕೆಯನ್ನು ನಿಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದೆಯಲ್ಲದೆ,ಅವುಗಳನ್ನು ಪೂರೈಕೆದಾರರಿಗೆ ವಾಪಸ್ ಮಾಡುವಂತೆ ತಿಳಿಸಿದೆ.
ಕೆಲವು ವ್ಯಕ್ತಿಗಳು ಚೀನಿ ಉತ್ಪನ್ನಗಳಿಗೆ ದೋಷಯುಕ್ತ ಎಂದು ಹಣೆಪಟ್ಟಿ ಹಚ್ಚುತ್ತಿರುವುದು ಮತ್ತು ವಿಷಯಗಳನ್ನು ಪೂರ್ವಾಗ್ರಹದಿಂದ ನೋಡುತ್ತಿರುವುದು ಅನ್ಯಾಯ ಮತ್ತು ಬೇಜವಾಬ್ದಾರಿಯಿಂದ ಕೂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಜಿ,ತಾನು ಪ್ರಸ್ತಾಪಿಸಿರುವ ವ್ಯಕ್ತಿಗಳು ಯಾರು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
ಕೊರೋನ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ತನ್ನ ಬೆಂಬಲ ಮುಂದುವರಿಯುತ್ತದೆ ಮತ್ತು ಉಭಯ ದೇಶಗಳ ಜನರನ್ನು ಸೋಂಕಿನಿಂದ ರಕ್ಷಿಸಲು ಶೀಘ್ರ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಭಾರತ ಸರಕಾರದೊಂದಿಗೆ ಜಂಟಿಯಾಗಿ ಶ್ರಮಿಸುತ್ತೇನೆ ಎಂದು ಚೀನಾ ಹೇಳಿದೆ.
ಭಾರತವು ಚೀನಾದ ಸದ್ಭಾವನೆ ಮತ್ತು ಪ್ರಾಮಾಣಿಕತೆಯನ್ನು ಗೌರವಿಸುತ್ತದೆ ಮತ್ತು ಚೀನಾದ ಕಂಪನಿಗಳ ಜೊತೆಗೆ ಸಮಯೋಚಿತ ಮಾತುಕತೆ ನಡೆಸಿ ವಾಸ್ತವವನ್ನು ಅರಿತುಕೊಂಡು ಸಮಸ್ಯೆಯನ್ನು ನ್ಯಾಯಯುತವಾಗಿ ಬಗೆಹರಿಸುತ್ತದೆ ಎಂದು ಚೀನಾ ಆಶಿಸಿದೆ ಎಂದೂ ಜಿ ತಿಳಿಸಿದ್ದಾರೆ.







