ಕಲಬುರಗಿ: ಸಿಡಿಲು ಬಡಿದು ಯುವಕ ಸೇರಿ ಮೂವರು ಮೃತ್ಯು

ಸಾಂದರ್ಭಿಕ ಚಿತ್ರ
ಕಲಬುರಗಿ, ಎ.28: ಇಲ್ಲಿನ ಚಿಂಚೋಳಿ ತಾಲೂಕಿನ ಅಲ್ಲಾಹಪುರ ಗ್ರಾಮದ ಹತ್ತಿರ ಸಿಡಿಲು ಬಡಿದು ಓರ್ವ ಕೂಲಿ ಕಾರ್ಮಿಕ ಸಾವನಪ್ಪಿರುವ ಘಟನೆ ಇಂದು ಸಂಜೆ ವೇಳೆ ನಡೆದಿದೆ.
ಅನೀಲ್ ಚಂದ್ರಶೇಟಿ (23) ಸಿಡಿಲಿಗೆ ಬಲಿಯಾದ ಯುವಕ. ಅನೀಲ್ ಕೊಡ್ಲಿ ಗ್ರಾಮದ ನಿವಾಸಿಯಾಗಿದ್ದು, ಇಂದು ಸಂಜೆ ವೇಳೆಯಲ್ಲಿ ಮಳೆ ಮತ್ತು ಸಿಡಿಲಿನ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಚಿಂಚೋಳಿ ತಹಶೀಲ್ದಾರ್ ಮತ್ತು ಶಾಸಕ ಅವಿನಾಶ್ ಜಾಧವ್ ಅವರು ಭೇಟಿ ನೀಡಿದ್ದು, ಈ ವೇಳೆಯಲ್ಲಿ ರಟಕಲ್ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಶಂಕರ್ ಸುಬೇದಾರ್, ಸಿಪಿಐ ವಿಜಯ ಬಿ ಮಠಪತಿ ಹಾಗೂ ಸಿಬ್ಬಂದಿಗಳು ಜೊತೆಗಿದ್ದರು.
ಇದೇ ರೀತಿ ಜಿಲ್ಲೆಯ ಕಮಲಾಪುರ ತಾಲೂಕಿನ ಭುಯ್ಯಾಂರ ಗ್ರಾಮದ ಘಟನೆಯಲ್ಲಿ ಸುಭಾಷ್ ಹಳಕೇರಿ ಹಾಗೂ ಕುಪ್ಪಣ್ಣ ನವಲೆ ಎಂಬವರು ಸಿಡಿಲಿಗೆ ಬಲಿಯಾಗಿದ್ದಾರೆ.
ಇವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





