ಕೊರೋನ ವೈರಸ್: ಭಾರತದಲ್ಲಿ ಸಾವಿರ ದಾಟಿದ ಸಾವಿನ ಸಂಖ್ಯೆ
ಹೊಸದಿಲ್ಲಿ : ದೇಶದಲ್ಲಿ ಕೊರೋನ ವೈರಸ್ ಕಾಣಿಸಿಕೊಂಡ ಬಳಿಕ ಗರಿಷ್ಠ ಸಂಖ್ಯೆಯ ಪ್ರಕರಣಗಳು (1840) ಮಂಗಳವಾರ ದಾಖಲಾಗಿವೆ. ಅಂತೆಯೇ ಒಂದೇ ದಿನದಲ್ಲಿ ಗರಿಷ್ಠ ಸಾವಿನ ಸಂಖ್ಯೆ (69)ಯೂ ಮಂಗಳವಾರ ದಾಖಲಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಮಹಾರಾಷ್ಟ್ರದಲ್ಲಿ ಮಂಗಳವಾರ ಗರಿಷ್ಠ (31) ಸಾವು ದಾಖಲಾಗಿದ್ದು, ಗುಜರಾತ್ (19), ಮಧ್ಯಪ್ರದೇಶ (10) ಮತ್ತು ಉತ್ತರ ಪ್ರದೇಶ (3) ನಂತರದ ಸ್ಥಾನಗಳಲ್ಲಿವೆ. ಮುಂಬೈ ಹಾಗೂ ಅಹ್ಮದಾಬಾದ್ ನಗರಗಳಲ್ಲಿ ಒಂದೇ ದಿನ ಕ್ರಮವಾಗಿ 25 ಹಾಗೂ 19 ಸಾವಿನ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 729 ಪ್ರಕರಣಗಳು ವರದಿಯಾಗಿದ್ದರೆ, ತಮಿಳುನಾಡಿನಲ್ಲಿ ಕೂಡಾ ಇದುವರೆಗಿನ ಗರಿಷ್ಠ ಅಂದರೆ 121 ಪ್ರಕರಣಗಳು ಮಂಗಳವಾರ ಕಂಡುಬಂದಿವೆ. ಗುಜರಾತ್ (226), ದೆಹಲಿ (206) ಮತ್ತು ಮಧ್ಯಪ್ರದೇಶದಲ್ಲೂ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ದೇಶದಲ್ಲಿ ಇದುವರೆಗೆ ಗರಿಷ್ಠ ಅಂದರೆ 1755 ಪ್ರಕರಣಗಳು ಎ. 23ರಂದು ದಾಖಲಾಗಿದ್ದವು.
ಸತತ ಎರಡನೇ ದಿನ ಕೂಡಾ ದೆಹಲಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ 206 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3314ಕ್ಕೇರಿದೆ. ಮಹಾರಾಷ್ಟ್ರ (9318) ಮತ್ತು ಗುಜರಾತ್ (3774) ಹೊರತುಪಡಿಸಿದರೆ ಮೂರನೇ ಗರಿಷ್ಠ ಸಂಖ್ಯೆಯ ಪ್ರಕರಣ ದೆಹಲಿಯಲ್ಲಿದೆ.
ಮಹಾರಾಷ್ಟ್ರದಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 400ಕ್ಕೇರಿದೆ. ಮುಂಬೈನಲ್ಲೇ 244 ಸಾವು ಸಂಭವಿಸಿದೆ. ಗುಜರಾತ್ನಲ್ಲಿ ಸಂಭವಿಸಿದ ಒಟ್ಟು 69 ಸಾವಿನ ಪೈಕಿ 59 ಅಹ್ಮದಾಬಾದ್ನಲ್ಲೇ ಇದೆ.