ಮೋದಿಯನ್ನು ಫಾಲೋ ಮಾಡಿದ ಮೂರೇ ವಾರಗಳಲ್ಲಿ ಅನ್‍ಫಾಲೋ ಮಾಡಿದ ಶ್ವೇತ ಭವನದ ಟ್ವಿಟರ್ ಹ್ಯಾಂಡಲ್

ಹೊಸದಿಲ್ಲಿ: ಎರಡು ಕೋಟಿಗೂ ಅಧಿಕ ಫಾಲೋವರ್ಸ್ ಇರುವ ಅಮೆರಿಕಾದ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಅಧಿಕೃತ ಟ್ವಿಟರ್ ಹ್ಯಾಂಡಲ್ ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ಕಾರ್ಯಾಲಯದ ಟ್ವಿಟರ್ ಹ್ಯಾಂಡಲ್ ಅನ್ನು ಅನ್‍ಫಾಲೋ ಮಾಡಿದೆ. ಇವುಗಳ ಜತೆಗೆ ಅಮೆರಿಕಾದಲ್ಲಿನ ಭಾರತೀಯ ದೂತಾವಾಸದ ಟ್ವಿಟರ್ ಹ್ಯಾಂಡಲ್ ಅನ್ನೂ ಶ್ವೇತಭವನ ಅನ್‍ಫಾಲೋ ಮಾಡಿದೆ.
ಮೂರು ವಾರಗಳ ಹಿಂದೆಯಷ್ಟೇ ಅಮೆರಿಕಾ ಆಡಳಿತದ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರಧಾನಿ ಮೋದಿಯನ್ನು ಫಾಲೋ ಮಾಡಿತ್ತಲ್ಲದೆ ಅದು ಫಾಲೋ ಮಾಡಿದ ಏಕೈಕ ವಿಶ್ವ ನಾಯಕ ಮೋದಿ ಆಗಿದ್ದರು. ನಂತರ ಭಾರತಕ್ಕೆ ಸಂಬಂಧಿಸಿದ 19 ಟ್ವಿಟರ್ ಹ್ಯಾಂಡಲ್‍ಗಳನ್ನು ಅದು ಫಾಲೋ ಮಾಡಿತ್ತು, ಈಗ ಅದು ಭಾರತಕ್ಕೆ ಸಂಬಂಧಿಸಿದಂತಹ 13 ಟ್ವಿಟರ್ ಹ್ಯಾಂಡಲ್‍ಗಳನ್ನಷ್ಟೇ ಫಾಲೋ ಮಾಡುತ್ತಿದೆ.
ಭಾರತ-ಅಮೆರಿಕಾ ನಡುವಿನ ಉತ್ತಮ ಬಾಂಧವ್ಯದ ಸಂಕೇತವಾಗಿ ಶ್ವೇತಭವನ ಪ್ರಧಾನಿ ಮೋದಿಯನ್ನು, ಮುಖ್ಯವಾಗಿ ಅವರು ಅಮೆರಿಕಾಗೆ ಹೈಡ್ರೋಕ್ಸಿಕ್ಲೊರೊಖ್ವೀನ್ ರಫ್ತುಗೊಳಿಸಲು ನಿರ್ಧರಿಸಿದ ನಂತರ ಎಪ್ರಿಲ್ 10ರಂದು ಫಾಲೋ ಮಾಡಲು ಆರಂಭಿಸಿತ್ತೆಂದು ಹೇಳಲಾಗಿತ್ತು . ಈಗ ಅನ್‍ಫಾಲೋ ಮಾಡಿರುವ ಹಿಂದಿನ ಕಾರಣ ತಿಳಿದು ಬಂದಿಲ್ಲ.





