ದ್ವೇಷದ ಸುದ್ದಿಗಳ ವಿರುದ್ಧ 1015 ಪ್ರಕರಣ ದಾಖಲು : ಪಾಪ್ಯುಲರ್ ಫ್ರಂಟ್

ಮಂಗಳೂರು : ಸಂಘಪರಿವಾರದಿಂದ ಇತ್ತೀಚಿಗೆ ಯೋಜನಾಬದ್ಧವಾಗಿ ನಡೆಸಲಾದ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಅಭಿಯಾನಕ್ಕೆ ನಮ್ಮ ದೇಶವು ಸಾಕ್ಷಿಯಾಯಿತು. ಈ ದ್ವೇಷ ಅಭಿಯಾನದ ಉದ್ದೇಶವು ಮುಸ್ಲಿಮ್ ಸಮುದಾಯವನ್ನು ರಾಕ್ಷಸೀಕರಿಸುವು ದಾಗಿತ್ತು. ಸಾಮಾಜಿಕ ಮಾಧ್ಯಮವು ಕೊರೋನ ವೈರಸ್ ಮುಸ್ಲಿಮರ ಯೋಜಿತ ಪಿತೂರಿ ಎಂದು ಬಿಂಬಿಸುವ ದ್ವೇಷದ ಪೋಸ್ಟ್‌ಗಳೊಂದಿಗೆ ತುಂಬಿತುಳುಕಿತ್ತು. ದುರದೃಷ್ಟವಶಾತ್, ದ್ವೇಷದ ಸುದ್ದಿ ಕಾರ್ಖಾನೆಗಳನ್ನು ಬಹಿರಂಗಪಡಿಸಬೇಕಾಗಿದ್ದ ಮುಖ್ಯವಾಹಿನಿ ಮಾಧ್ಯಮಗಳು ಕೂಡ ಈ ಅಭಿಯಾನದಲ್ಲಿ ಭಾಗಿಯಾದವು ಮತ್ತು ಪ್ರೈಮ್ ಟೈಮ್ ಚರ್ಚೆಗಳನ್ನು ನಡೆಸಿ ಮುಸ್ಲಿಮ್ ಸಮುದಾಯವನ್ನು ನೇರವಾಗಿ ಗುರಿಪಡಿಸಿದವು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ತಿಳಿಸಿದ್ದಾರೆ.
ಈ ದ್ವೇಷ ಅಭಿಯಾನದ ನೇರ ಪರಿಣಾಮವೆಂಬಂತೆ, ಭಾರತವು ದೇಶಾದ್ಯಂತ ಅಮಾಯಕ ಮುಸ್ಲಿಮರ ಮೇಲಿನ ದಾಳಿಯ ಹಲವಾರು ಘಟನೆಗಳಿಗೆ ಸಾಕ್ಷಿಯಾಯಿತು. ಹಲವು ಕಡೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಯಿತು. ತರಕಾರಿ/ಹಣ್ಣಿನ ಮುಸ್ಲಿಮ್ ವ್ಯಾಪಾರಿಗಳ ಮೇಲೆ ದಾಳಿ ನಡೆದ ಘಟನೆಗಳೂ ವರದಿಯಾದವು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ತನ್ನ ಕೇಡರ್ ನೆಟ್‌ವರ್ಕ್ ಮತ್ತು ಕಾನೂನು ಸ್ವಯಂ ಸೇವಕರ ಮೂಲಕ ಈ ದ್ವೇಷ ಅಭಿಯಾನಕ್ಕೆ ಪ್ರತಿಕ್ರಿಯಿಸಿತು. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುವವರನ್ನು ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಆಕ್ರಮಣಕಾರಿ ಸುದ್ದಿ ಪ್ರಕಟಿಸಿದವರು ಮತ್ತು ಪ್ರಸಾರ ಮಾಡಿದವರನ್ನು ಗುರುತಿಸಿಕೊಂಡು ಸಂಘಟನೆಯು ಕಾನೂನು ಕ್ರಮವನ್ನು ಪ್ರಾರಂಭಿಸಿತು. ಪಾಪ್ಯುಲರ್ ಫ್ರಂಟ್ ರಾಜ್ಯ ಮತ್ತು ಜಿಲ್ಲಾ ಘಟಕಗಳು ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಖಾತೆಗಳ ವಿರುದ್ಧ 8 ರಾಜ್ಯಗಳಲ್ಲಿ 1015 ಪ್ರಕರಣಗಳನ್ನು ದಾಖಲಿಸಿದೆ. ವಿವಿಧ ಮಾಧ್ಯಮ ಕೇಂದ್ರಗಳಿಗೆ 500 ಪ್ರತ್ಯುತ್ತರ ಮತ್ತು ನೋಟೀಸುಗಳನ್ನು ಕಳುಹಿಸಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಮಧ್ಯ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕೇಸುಗಳನ್ನು ದಾಖಲಿಸಲಾಗಿದೆ. ಪಾಪ್ಯುಲರ್ ಫ್ರಂಟ್‌ನ ಕಾನೂನು ಕ್ರಮದ ಫಲಿತಾಂಶವಾಗಿ 19 ಮಂದಿಯ ಬಂಧನ ನಡೆದಿದೆ. ಈ ಕಾನೂನು ಮಧ್ಯಪ್ರವೇಶವು ಮುಂದುವರಿದಿದೆ ಮತ್ತು ಮುಂಬರುವ ದಿನಗಳಲ್ಲಿ ಮತ್ತಷ್ಟು ಕೇಸುಗಳನ್ನು ದಾಖಲಿಸಲಾಗುವುದು ಎಂದು ಮುಹಮ್ಮದ್ ಶಾಕಿಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







