ಮೇ 1ರಂದು ಮನೆಮನೆಯಲ್ಲಿ ಮೇ ದಿನಾಚರಣೆ
ಉಡುಪಿ, ಎ. 29 : ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ವರ್ಷದ 134ನೇ ಮೇ ದಿನಾಚರಣೆಯನ್ನು ಕಾರ್ಮಿಕರು ಜಿಲ್ಲೆಯಾದ್ಯಂತ ತಮ್ಮ ಮನೆಗಳಲ್ಲಿ ಸಮವಸ್ತ್ರ ಧರಿಸಿ ತಮ್ಮ ಬೇಡಿಕೆಗಳ ಪ್ಲೇ ಕಾರ್ಡ್ ಹಿಡಿದು ಆಚರಿಸಲಿದ್ದಾರೆ.
ಸಿಐಟಿಯುಗೆ ಸೇರಿದ ಹಂಚು, ಬೀಡಿ, ಕಟ್ಟಡ, ಗೇರುಬೀಜ, ಸಿಟಿಬಸ್, ಆಟೋರಿಕ್ಷ ಚಾಲಕರು, ಅಂಗನವಾಡಿ, ಬಿಸಿಯೂಟ, ಆಶಾ, ಸೆಕ್ಯೂರಿಟಿ ನೌಕರರು ತಮ್ಮ ಮನೆಗಳಲ್ಲಿಯೇ ಮೇ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಸಿಐಟಿಯು ಕಚೇರಿಗಳಲ್ಲಿ ಕಾರ್ಮಿಕ ಮುಖಂಡರು ಅಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಹೇ ಮಾರ್ಕೆಟ್ ಹುತಾತ್ಮರ ಬಲಿದಾನ ಸ್ಮರಿಸಲಿರುವರು.
ಕಾರ್ಮಿಕ ವರ್ಗದ ಐಕ್ಯತೆ, ಕಾರ್ಮಿಕ ವರ್ಗದ ಹಕ್ಕುಗಳ ರಕ್ಷಣೆ, ಕಾರ್ಮಿಕರ ಬೇಡಿಕೆ ಉದ್ಯೋಗ ಉಳಿಸಿ, ಆರ್ಥಿಕತೆ ರಕ್ಷಿಸಿರಿ, ಲಾಕ್‌ಡೌನ್ ಸಂತ್ರಸ್ಥರಿಗೆ ಆಹಾರ ಒದಗಿಸಿರಿ, ಸೊಂಕಿಗೆ ರೋಗಕ್ಕೆ ಜಾತಿಮತ ಧರ್ಮ ತಳಕು ಹಾಕೋದು ಬೇಡವೇ ಬೇಡ, ಕೆಲಸದ ಅವಧಿ 8 ರಿಂದ 12ಗಂಟೆಗೆ ಹೆಚ್ಚಳ ಬೇಡ, ಭಾಷಣ ಸಾಕು-ವೇತನ ಬೇಕು, ಕೋಮು ಸೌಹಾರ್ಧತೆ ಕಾಪಾಡಲು, ಕೋವಿಡ್ -19 ಹಿಮ್ಮೆಟ್ಟಿಸಲು ದೈಹಿಕ ಅಂತರ ಕಾಪಾಡಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳಲಾಗುವುದು ಎಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕ್ಲಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







