ಕೋವಿಡ್ ನಿಯಂತ್ರಣ ಹೋರಾಟದಲ್ಲಿ ಕೆಐಓಸಿಎಲ್
ಮಂಗಳೂರು, ಎ.29: ಕೇಂದ್ರ ಸರಕಾರದ ಉಕ್ಕಿನ ಸಚಿವಾಲಯದ ಅಡಿಯಲ್ಲಿರುವ ಕಬ್ಬಿಣದ ಅದಿರು ಗಣಿಗಾರಿಕೆಯ ವ್ಯವಹಾರದಲ್ಲಿ ತೊಡಗಿರುವ ಕೆಐಓಸಿಎಲ್ ಲಿಮಿಟೆಡ್ ಕಂಪನಿಯು ಕೋವಿಡ್ 19 ನಿಯಂತ್ರಣಕ್ಕೆ ಸಹಕಾರವನ್ನು ನೀಡುತ್ತಿರುವುದಾಗಿ ಕಂಪನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಂ.ವಿ. ಸುಬ್ಬಾರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನಿಧಿಗೆ 10.1 ಕೋಟಿ ರೂ. ನೀಡಿರುವ ಜತೆಯಲ್ಲೇ ಉದ್ಯೋಗಿಗಳ ಒಂದು ದಿನದ ವೇತನದ ಮೊತ್ತ 23.72 ಲಕ್ಷ ರೂ.ಗಳನ್ನು ಕೂಡಾ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ಇದಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 15 ಲಕ್ಷ ರೂ., ದ.ಕ. ಜಿಲ್ಲಾಡಳಿತದ ಅಗತ್ಯಕ್ಕೆ ಅನುಗುಣವಾಗಿ ದ.ಕ. ಜಿಲ್ಲೆಯಲ್ಲಿರುವ ವಲಸಿಗರಿಗೆ ಆಹಾರ ಒದಗಿಸಲು 200 ಕ್ವಿಂಟಾಲ್ ಅಕ್ಕಿ ಖರೀದಿಗೆ 4.46 ಲಕ್ಷರೂ.ಗಳನ್ನು ಆಹಾರ ನಿಗಮಕ್ಕೆ ನಿೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೂಳೂರು, ಕಾವೂರು ಹಾಗೂ ಸಮೀಪದ ಪ್ರದೇಶಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ, ಪೆಲ್ಲೆಟ್ ಪ್ಲಾಂಟ್ ಯೂನಿಟ್‌ನ ಮುಖ್ಯ ದ್ವಾರದ ಬಳಿ ಇರುವ ಮೆಸ್ಕಾಂ ಉದ್ಯೋಗಿಗಳಿಗೆ ಉಪಹಾರ ಮತ್ತು ಊಟವನ್ನು ಕಂಪನಿಯಿಂದ ನೀಡಲಾಗುತ್ತಿದೆ. ಬೆಂಗಳೂರು ಮತ್ತು ಮಂಗಳೂರು ಪ್ರದೇಶಗಳಲ್ಲಿ ಅಗತ್ಯವಿರುವ ಜನರಿಗೆ ಫೇಸ್‌ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್, ಉಚಿತ ಆಹಾರವನ್ನು ಒದಗಿಸಲಾಗುತ್ತಿದೆ. ಮುಕ್ಕಾ ಪ್ರದೇಶಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕಿರಾಣಿ ವಸ್ತುಗಳನ್ನು ವಿತರಿಸಲಾಗಿದೆ.
ಮಂಗಳೂರಿನಲ್ಲಿರುವ ನಿರ್ಗತಿಕ ಅನಾಥ ಮಕ್ಕಳ ಮನೆಯಾದ ಸಂವೇದನಕ್ಕೆ ಮಾಸಿಕ ದಿನಸಿ ವಸ್ತುಗಳನ್ನು ಮತ್ತು ಮಾಸ್ಕ್‌ಗಳನ್ನು ಹಸ್ತಾಂತರಿಸಲಾಗಿದೆ. ಕುದುರೆಮುಖ ಲಯನ್ಸ್ ಕ್ಲಬ್ ವತಿಯಿಂದ ಕೆಐಓಸಿಎಲ್ ಟೌನ್‌ಶಿಪ್ ಮತ್ತು ಪೆಲ್ಲೆಟ್ ಪ್ಲಾಂಟ್‌ನಲ್ಲಿ ನಿಯೋಜಿಸಲಾಗಿರುವ ಬಡ ಗುತ್ತಿಗೆ ಕಾರ್ಮಿಕರಿಗೆ ಆಹಾರ ವಸ್ತುಗಳನ್ನು ವಿತರಿಸಲಾಗಿದೆ. ಕೆಐಓಸಿಎಲ್ ಅಧಿಕಾರಿಗಳ ಸಂಘವು ಕಾವೂರು ಜ್ಯೋತಿನಗರದಲ್ಲಿರುವ ಲೇಬರ್ ಕಾಲೊನಿಯ ಕಾರ್ಮಿಕರಿಗೆ ಫೇಸ್‌ಮಾಸ್ಕ್‌ಗಳನ್ನು ವಿತರಿಸಿದೆ.
ಕೆಐಓಸಿಎಲ್‌ನಲ್ಲಿ ಮಾನ್ಯತೆ ಪಡೆದಿರುವ ಕಾರ್ಮಿಕ ಒಕ್ಕೂಟದ ಕುದುರೆಮುಖ ಮಜ್ದೂರ್ ಸಂಘವು ಕೆಐಓಸಿಎಲ್‌ನಲ್ಲಿ ನಿಯೋಜಿಸಲಾಗಿರುವ ಗುತ್ತಿಗೆ ಕಾರ್ಮಿಕರಿಗೆ ದಿನಸಿ ಹಾಗೂ ಬೊಂದೇಲ್ ಹಾಗೂ ಕಾವೂರು ಪ್ರದೇಶಗಳಲ್ಲಿ ವಾಸವಾಗಿರುವ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಲಾಕ್‌ಡೌನ್ ಪ್ರಯುಕ್ತ ಕಂಪನಿಯ ಹೆಚ್ಚಿನ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಗತ್ಯ ಕಾರ್ಯಾಚರಣೆಗಳು ಮಾತ್ರ ಸುರಕ್ಷಿತ ಕ್ರಮಗಳೊಂದಿಗೆ ಘಟಕದಲ್ಲಿ ನಡೆಯುತ್ತಿವೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







