ಕಚೇರಿಗೆ ಬರುವ ಮುನ್ನ ಆರೋಗ್ಯ ಸೇತು ಆ್ಯಪ್‌ನಲ್ಲಿ ಆರೋಗ್ಯ ಪರೀಕ್ಷೆ ಕಡ್ಡಾಯ: ತನ್ನ ನೌಕರರಿಗೆ ಕೇಂದ್ರದ ತಾಕೀತು

ಹೊಸದಿಲ್ಲಿ, ಎ.29: ಸರಕಾರಿ ನೌಕರರು ಕೊರೋನ ವೈರಸ್ ಪ್ರಸರಣದ ನಿಯಂತ್ರಣಕ್ಕಾಗಿ ರೂಪಿಸಲಾಗಿರುವ ‘ಆರೋಗ್ಯ ಸೇತು ’ ಆ್ಯಪ್‌ನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಮನೆಯಿಂದ ಹೊರಬೀಳುವ ಮುನ್ನ ತಮ್ಮ ಆರೋಗ್ಯ ಸ್ಥಿತಿಯನ್ನು ಆ್ಯಪ್‌ನಲ್ಲಿ ಪರಿಶೀಲಿಸಿಕೊಳ್ಳಬೇಕು. ಅದು ‘ಸುರಕ್ಷಿತ’ ಅಥವಾ ‘ಕಡಿಮೆ ಅಪಾಯ’ದ ಸಂಕೇತವನ್ನು ನೀಡಿದರೆ ಮಾತ್ರ ಕಚೇರಿಗೆ ಹಾಜರಾಗಬೇಕು ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಬುಧವಾರ ಆದೇಶವನ್ನು ಹೊರಡಿಸಿದೆ. ಕೇಂದ್ರ ಸರಕಾರದೊಂದಿಗೆ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಈ ಆದೇಶವು ಅನ್ವಯಿಸುತ್ತದೆ. ಎಲ್ಲ ಸ್ವಾಯತ್ತ ಮತ್ತು ಶಾಸನಬದ್ಧ ಸಂಸ್ಥೆಗಳು ಹಾಗೂ ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರಕಾರವು ತಿಳಿಸಿದೆ.
ನೀತಿ ಆಯೋಗದ ಉದ್ಯೋಗಿಯೋರ್ವನಲ್ಲಿ ಕೊರೋನ ವೈರಸ್ ದೃಢಪಟ್ಟ ಬಳಿಕ ಮಂಗಳವಾರ 48 ಗಂಟೆಗಳ ಅವಧಿಗೆ ಆಯೋಗದ ಕಚೇರಿಯನ್ನು ಮುಚ್ಚಿದ ಬೆನ್ನಲ್ಲೇ ಸರಕಾರದ ಈ ಆದೇಶ ಹೊರಬಿದ್ದಿದೆ. ಸೋಂಕಿತ ಉದ್ಯೋಗಿಯ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ಸ್ವಯಂ ಕ್ವಾರಂಟೈನ್‌ಗೆ ಒಳಪಡುವಂತೆ ಸೂಚಿಸಲಾಗಿದೆ.
ಆ್ಯಪ್ ಬ್ಲೂಟೂಥ್ ಸಾಮೀಪ್ಯದ (ಸೋಂಕಿತ ವ್ಯಕ್ತಿಯೊಂದಿಗಿನ ಇತ್ತೀಚಿನ ಸಂಪರ್ಕ)ಆಧಾರದಲ್ಲಿ ಲೆಕ್ಕಾಚಾರದಂತೆ ಬಳಕೆದಾರ ‘ಮಧ್ಯಮ’ ಅಥವಾ ‘ಹೆಚ್ಚಿನ ಅಪಾಯ’ಸ್ಥಿತಿಯಲ್ಲಿರುವ ಸಂದೇಶವನ್ನು ನೀಡಿದರೆ ಆತ/ಆಕೆ ಕಚೇರಿಗೆ ಬರಬಾರದು ಮತ್ತು 14 ದಿನಗಳ ಕಾಲ ಅಥವಾ ಆರೋಗ್ಯ ಸ್ಥಿತಿ ‘ಸುರಕ್ಷಿತ ’ ಅಥವಾ ‘ಕಡಿಮೆ ಅಪಾಯ’ದ ಸಂಕೇತ ಲಭಿಸುವವರೆಗೆ ಸ್ವಯಂ ನಿರ್ಬಂಧದಲ್ಲಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರೋಗ್ಯ ಸೇತು ಆ್ಯಪ್ ಬ್ಲೂಟೂಥ್ ತಂತ್ರಜ್ಞಾನವನ್ನು ಬಳಸಿಕೊಂಡು ನಾಗರಿಕರ ಚಲನವಲನಗಳು ಮತ್ತು ಸೋಂಕಿತ ಅಥವಾ ಅಪಾಯಕಾರಿ ವ್ಯಕ್ತಿಯ ಸಾಮೀಪ್ಯವನ್ನು ಆಧರಿಸಿ ಅವರಿಗೆ ಕೊರೋನ ವೈರಸ್ ಸೋಂಕಿನ ಅಪಾಯವನ್ನು ಗುರುತಿಸಲು ನೆರವಾಗುತ್ತದೆ. ಆ್ಯಪ್ ರವಾನಿಸುವ ಮಾಹಿತಿಗಳನ್ನು ಸರಕಾರದ ಆರೋಗ್ಯ ಇಲಾಖೆಯು ಪರಿಶೀಲಿಸಿ,ಅಗತ್ಯವಿದ್ದರೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.







