ಅಪಾರ್ಟ್‌ಮೆಂಟ್ ಅಧ್ಯಕ್ಷನಿಗೆ ಜೀವಬೆದರಿಕೆ: ಆರೋಪಿ ಸೆರೆ
ಮಂಗಳೂರು, ಎ.29: ಲಾಕ್‌ಡೌನ್ ಸಮಯದಲ್ಲಿ ಅಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದ್ದನ್ನು ಪ್ರಶ್ನಿಸಿದ ಅಪಾರ್ಟ್‌ಮೆಂಟ್ ಅಧ್ಯಕ್ಷನಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬರ್ಕೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ನಗರದ ಬಲ್ಲಾಳ್‌ಬಾಗ್‌ನ ಅಪಾರ್ಟ್‌ಮೆಂಟ್‌ಗೆ ಎ.23ರಂದು ಸ್ಥಳೀಯ ನಿವಾಸಿ ವಿವೇಕ್ ಶೆಟ್ಟಿಗಾರ (40) ಎಂಬಾತ ಅಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದ್ದ. ಈ ಸಂದರ್ಭ ವಾಚ್‌ಮೆನ್ ತಡೆದು ಪ್ರಶ್ನಿಸುತ್ತಿದ್ದು, ಈ ವೇಳೆ ಅಪಾರ್ಟ್‌ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಎಂ. ಚಂದ್ರಶೆಟ್ಟಿ ‘ಲಾಕ್‌ಡೌನ್ ವೇಳೆ ಅಪಾರ್ಟ್‌ಮೆಂಟ್ ನಿವಾಸಿಗಳ ಹೊರತು ಹೊರಗಿನವರಿಗೆ ಪ್ರವೇಶವಿಲ್ಲ ಎಂದು ನಿಮಗೆ ಈ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ಆದರೂ ನೀವು ಮತ್ತೆ ಮತ್ತೆ ಬರುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಆರೋಪಿಯು ಚಂದ್ರಶೆಟ್ಟಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ದೂರಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಬರ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





