2020-21ನೆ ಶೈಕ್ಷಣಿಕ ವರ್ಷ : ದ.ಕ.ಜಿಲ್ಲೆಯ 1626 ವಿದ್ಯಾರ್ಥಿಗಳು ಬ್ಯಾರಿ ಭಾಷೆ ಕಲಿಯಲು ಆಸಕ್ತಿ
ಮಂಗಳೂರು, ಎ.29: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನಿರಂತರ ಪ್ರಯತ್ನದ ಫಲವಾಗಿಯೂ 2020-21ನೆ ಶೈಕ್ಷಣಿಕ ವರ್ಷದಲ್ಲಿ ದ.ಕ.ಜಿಲ್ಲೆಯ 5 ಶೈಕ್ಷಣಿಕ ವಲಯಗಳ 6ರಿಂದ 10ನೆ ತರಗತಿವರೆಗಿನ 1626 ವಿದ್ಯಾರ್ಥಿಗಳು ‘ಬ್ಯಾರಿ’ಯನ್ನು ತೃತೀಯ ಭಾಷೆಯಾಗಿ ಕಲಿಯಲು ಆಸಕ್ತಿ ತೋರಿದ್ದಾರೆ.
ಆ ಪೈಕಿ ಬಂಟ್ವಾಳದಲ್ಲಿ ಅತೀ ಹೆಚ್ಚು ಅಂದರೆ 1,131 ಮಕ್ಕಳು ಆಸಕ್ತಿ ತೋರಿದರೆ, ಮಂಗಳೂರು ದಕ್ಷಿಣ ವಲಯದಲಲಿ 70 ಮಕ್ಕಳು ಆಸಕ್ತಿ ತೋರಿದ್ದಾರೆ. ಬೆಳ್ತಂಗಡಿ ಮತು ಸುಳ್ಯದಲ್ಲಿ ಯಾರೂ ಅರ್ಜಿ ಸಲ್ಲಿಸಿಲ್ಲ. ಮಂಗಳೂರು ದಕ್ಷಿಣ ವಲಯದಲ್ಲಿ 6ನೆ ತರಗತಿಯಲ್ಲಿ 23, 7ರಲ್ಲಿ 27, 8ರಲ್ಲಿ 20 ಸಹಿತ ಒಟ್ಟು 70 ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ.
ಮಂಗಳೂರು ಉತ್ತರ ವಲಯದಲ್ಲಿ 6ನೆ ತರಗತಿಯಲ್ಲಿ 16, 7ರಲ್ಲಿ 15, 8ರಲ್ಲಿ 64, 9ರಲ್ಲಿ 27, 10ರಲ್ಲಿ 17 ಸಹಿತ 139 ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. ಬಂಟ್ಬಾಳ ವಲಯದಲ್ಲಿ 6ನೆ ತರಗತಿಯಲ್ಲಿ 336, 7ರಲ್ಲಿ 356, 8ರಲ್ಲಿ 304, 9ರಲ್ಲಿ 82, 10ರಲ್ಲಿ 53 ಸಹಿತ 1,131 ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. ಪುತ್ತೂರು ವಲಯದಲ್ಲಿ 6ನೆ ತರಗತಿಯಲ್ಲಿ 36, 7ರಲ್ಲಿ 36, 8ರಲ್ಲಿ 40 ಸಹಿತ 112 ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. ಮೂಡುಬಿದಿರೆ ವಲಯದಲ್ಲಿ 6ನೆ ತರಗತಿಯಲ್ಲಿ 32, 7ರಲ್ಲಿ 34, 8ರಲ್ಲಿ 38, 9ರಲ್ಲಿ 34, 10ರಲ್ಲಿ 36 ಸಹಿತ 174 ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. 5 ಶೈಕ್ಷಣಿಕ ವಲಯದ 6ನೆ ತರಗತಿಯಲ್ಲಿ 443, 7ರಲ್ಲಿ 468, 8ರಲ್ಲಿ 468, 9ರಲ್ಲಿ 143, 10ರಲ್ಲಿ 106 ಮಕ್ಕಳು ಕಲಿಕೆಗೆ ಆಸಕ್ತಿ ತೋರಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಬ್ಯಾರಿ ಭಾಷೆಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕಲಿಯಲು ಅವಕಾಶ ಕೋರಿ ಸರಕಾರಕ್ಕೆ ನಿರಂತರ ಪತ್ರ ಬರೆದು ಕೋರಲಾಗಿತ್ತು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸಲಹೆಯಂತೆ ಈಗಾಗಲೆ ಪಠ್ಯಪುಸ್ತಕ ರಚನಾ ಸಮಿತಿಯನ್ನೂ ರಚಿಸಲಾಗಿತ್ತು. ಅಲ್ಲದೆ ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಈ ಬಗ್ಗೆ ಸುತ್ತೋಲೆ ಹೊರಡಿಸಿ 7 ಶೈಕ್ಷಣಿಕ ವಲಯಗಳ ಅಧೀನದ ಶಾಲೆಗಳಲ್ಲಿ ಬ್ಯಾರಿ ಭಾಷೆ ಕಲಿಕೆಗೆ ಆಸಕ್ತಿಯಿರುವ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.







