ವೆನ್ಲಾಕ್‌ಗೆ ನಿರ್ಮಿತಿ ಕೇಂದ್ರದಿಂದ ಕೋವಿಡ್ 19 ಮಾದರಿ ಸಂಗ್ರಹಣಾ ಕೇಂದ್ರ ಹಸ್ತಾಂತರ
ಮಂಗಳೂರು, ಎ. 29: ನಗರದ ಪ್ರಮುಖ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಂಡಿರುವ ವೆನ್ಲಾಕ್ ಆಸ್ಪತ್ರೆಗೆ ದ.ಕ.ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಕೋವಿಡ್ 19 ಮಾದರಿ ಸಂಗ್ರಹಣಾ ಕೇಂದ್ರವನ್ನು ಶಾಸಕ ವೇದವ್ಯಾಸ್ ಕಾಮತ್ ಬುಧವಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವೈರಾಣು ಸೋಂಕಿತರು ಹೆಚ್ಚಾಗುತ್ತಿರುವ ವಿದ್ಯಮಾನಗಳು ಆಘಾತಕಾರಿ ಯಾಗಿದೆ. ಈಗಾಗಲೇ ಅನೇಕರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಅದಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ತಕ್ಷಣವೇ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ವೈರಾಣು ಸೋಂಕು ವ್ಯಾಪಕವಾಗಿ ಹರಡುವ ಭೀತಿಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಸಶಕ್ತವಾಗಿ ಕಾರ್ಯತಂತ್ರ ರೂಪಿಸುತ್ತಿದೆ. ಕರಾವಳಿಯ ಪ್ರಜ್ಞಾವಂತ ನಾಗರಿಕರು ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.
ಈ ಸಂದರ್ಭ ವೆನ್ಲಾಕ್ ಆಸ್ಪತ್ರೆಯ ಅಧಿಕಾರಿ, ವೈದ್ಯಾಧಿಕಾರಿ, ಸಿಬ್ಬಂದಿ ವರ್ಗ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರಾದ ವಿಜಯ ಕುಮಾರ್ ಶೆಟ್ಟಿ, ರೂಪಾ ಡಿ. ಬಂಗೇರ ಮತ್ತಿತರರು ಉಪಸ್ಥಿತರಿದ್ದರು.





