ದೇಶ ಬಿಟ್ಟು ಕೊರೋನ ವೈರಸ್ ಹೋಗುವಂತೆ ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತ ಮಹಿಳೆ

ಮಂಗಳೂರು : ಕೊರೋನ ಸೋಂಕು ಹಾವಳಿಯಿಂದ ಜಗತ್ತೇ ತತ್ತರಿಸಿದೆ. ಈ ಸೋಂಕನ್ನು ಓಡಿಸಲು ಸರಕಾರ, ವೈದ್ಯರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೆ, ಇತ್ತ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಕೊರೋನ ಸೋಂಕು ದೇಶ ಬಿಟ್ಟು ಓಡುವ ತನಕ ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತಿದ್ದಾರೆ.
ಬಾಗಲಕೋಟೆ ಮೂಲದ ಬಸಮ್ಮ ಎಂಬವರೇ ಈ ವಿಶಿಷ್ಟವಾದ ಹರಕೆ ಹೊತ್ತವರು. ಬಸಮ್ಮ ಅವರು 3 ವರ್ಷಗಳ ಹಿಂದೆ ಊರು ಬಿಟ್ಟು ಗಂಡನೊಟ್ಟಿಗೆ ಮಂಗಳೂರಿಗೆ ಬಂದು ಕೂಲಿ-ನಾಲಿ ಮಾಡಿಕೊಂಡಿದ್ದವರು. ಮದ್ಯಪಾನಿಯಾಗಿದ್ದ ಪತಿಯು ಮಕ್ಕಳು ಚಿಕ್ಕವರಿರುವಾಗಲೇ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಬಸಮ್ಮ ಇದ್ದ ಕೆಲಸವನ್ನೂ ಕಳೆದುಕೊಂಡರು.
ಆಗ ತಾನು ಬಾಡಿಗೆ ಮನೆಯಲ್ಲಿದ್ದ ಮಂಗಳೂರಿನ ಕೂಳೂರು ಸಮೀಪದ ಗುಡ್ಡೆಯಂಗಡಿಯಲ್ಲಿರುವ ಕಲ್ಲುರ್ಟಿ ದೈವದ ಮೊರೆ ಹೋಗಿದ್ದರು. ಪವಾಡವೆಂಬಂತೆ ಮರುದಿನವೇ ಕೆಲಸಕ್ಕೆ ಆಗಮಿಸುವಂತೆ ಕರೆ ಬಂದಿತ್ತು. ಆ ಬಳಿಕ ತನಗೆ ಏನೇ ಸಂಕಷ್ಟ ಬಂದೊದಗಿದರೂ ಇದೇ ಕಲ್ಲುರ್ಟಿ ದೈವಕ್ಕೆ ಹರಕೆ ಹೇಳುವ ಬಸಮ್ಮ ಇದೀಗ ಕೊರೋನಾ ಸಂಕಷ್ಟ ಕಳೆಯಲು ಕಲ್ಲುರ್ಟಿ ದೈವದ ಹೆಸರಿನಲ್ಲಿಯೇ ಹರಕೆ ಹೊತ್ತಿದ್ದಾರೆ. ಅಲ್ಲದೆ, ಶುಕ್ರವಾರವಿಡೀ ಉಪವಾಸದಿಂದಿರುವೆ ಎಂದು ಕಲ್ಲುರ್ಟಿ ದೈವಕ್ಕೆ ಮೊರೆ ಹೋಗಿದ್ದಾರೆ.
ಕೊರೋನ ಸೋಂಕು ಮಹಾಮಾರಿಯ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳನ್ನು ನೋಡುತ್ತಲೇ ತಲ್ಲಣಗೊಂಡ ಬಸಮ್ಮ ತಾನು ನಂಬಿದ ಕಲ್ಲುರ್ಟಿ ದೈವದ ಮೊರೆ ಹೋಗಿದ್ದಾರೆ. ತನ್ನ ಎಲ್ಲ ಸಂಕಷ್ಟವನ್ನು ಪರಿಹರಿಸಿರುವ ದೈವವೇ ಇದೀಗ ಕೊರೋನವನ್ನೂ ಮಣಿಸಲಿದೆ ಎನ್ನುತ್ತಾರೆ ಬಸಮ್ಮ.
'ವಿಶ್ವವನ್ನೇ ನಲುಗುವಂತೆ ಮಾಡಿರುವ ಕೊರೋನ ಸೋಂಕಿಗೆ ಕಡಿವಾಣ ಅಗತ್ಯ. ಆದಷ್ಟು ಬೇಗ ಈ ಕಾಯಿಲೆ ನಮ್ಮ ದೇಶ ಬಿಟ್ಟು ಹೋಗಲಿ ಎಂದು ಬರಿಗಾಲಲ್ಲಿ ನಡೆಯುವ ಹಾಗೂ ಶುಕ್ರವಾರ ಪೂರ್ತಿ ಉಪವಾಸದಿಂದಿರುವ ಹರಕೆ ಹೊತ್ತಿರುವೆ. ಕೊರೋನ ಸೋಂಕು ಪೂರ್ತಿ ಹೋಗುವವರೆಗೂ ಈ ಹರಕೆಯನ್ನು ನಿರಂತರವಾಗಿ ಪಾಲಿಸುತ್ತೇನೆ ಎಂದು ತಿಳಿಸಿದ್ದಾರೆ.







