ಯೋಧನ ಬಂಧನಕ್ಕೆ ಖಂಡನೆ: ಗೃಹ ಸಚಿವ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯಿಸಿ ಟ್ವಿಟರ್ ಅಭಿಯಾನ
#ResignHMBommai ಟ್ರೆಂಡಿಂಗ್

ಬೆಳಗಾವಿ, ಎ.29: ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕಾಗಿ ಬೆಳಗಾವಿಯ ಸಿಆರ್‍ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಬಂಧನ ಹಾಗೂ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯಿಸಿ ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭವಾಗಿದೆ.
ಎಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯೋಧ ಸಚಿನ್ ಸಾವಂತ್ ಮೇಲೆ ಹಲ್ಲೆ ನಡೆದಿತ್ತು. ಮನೆಯ ಮುಂದೆ ಬೈಕ್ ತೊಳೆಯುತ್ತಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರು ಯೋಧನನ್ನು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಸಚಿನ್ ಸಾವಂತ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮುಕಿ ನಡೆದಿತ್ತು. ಬಳಿಕ ಪೊಲೀಸರು ಲಾಠಿಯಲ್ಲಿ ಸಚಿನ್ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಸಚಿನ್ ಕೂಡಾ ಪೊಲೀಸರಿಗೆ ಹೊಡೆದಿದ್ದರು ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಚಿನ್ ಸಾವಂತ್ ರನ್ನು ಪೊಲೀಸರು ಬಂಧಿಸಿದ್ದರು. ಕೈಗೆ ಕೋಳ ತೊಡಿಸಿದ್ದ ಫೋಟೋ ಕೂಡಾ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ತೀವ್ರ ವಿರೋಧವೂ ಎದುರಾಗಿತ್ತು.





