2 ಲಕ್ಷಕ್ಕೂ ಅಧಿಕ ಎಚ್-1ಬಿ ವೀಸಾದಾರರಿಗೆ ಅಮೆರಿಕದ ಬಾಗಿಲು ಮುಚ್ಚುವುದೇ?

ವಾಶಿಂಗ್ಟನ್, ಎ. 29: ಗ್ರೀನ್ ಕಾರ್ಡನ್ನು ನಿರೀಕ್ಷಿಸುತ್ತಾ ಅಮೆರಿಕದಲ್ಲಿ ಅತಿಥಿ ಕೆಲಸಗಾರರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 2.50 ಲಕ್ಷ ಮಂದಿ ಜೂನ್ ಕೊನೆಯ ವೇಳೆಗೆ ತಮ್ಮ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬಹುದು ಎಂದು ವಾಶಿಂಗ್ಟನ್ ಡಿಸಿಯಲ್ಲಿ ನೆಲೆ ಹೊಂದಿರುವ ಸಂಸ್ಥೆ ನಿಸ್ಕಾನ್‌ಸೆನ್ ಸೆಂಟರ್‌ನ ವಲಸೆ ನೀತಿ ವಿಶ್ಲೇಷಕ ಜೆರೆಮಿ ನ್ಯೂಫೆಲ್ಡ್ ಹೇಳುತ್ತಾರೆ.
ಈ ಪೈಕಿ ಸುಮಾರು 2 ಲಕ್ಷ ಮಂದಿ ಎಚ್-1ಬಿ ವೀಸಾದಾರರು. ಸುಮಾರು ಮುಕ್ಕಾಲು ಭಾಗ ಎಚ್-1ಬಿ ವೀಸಾಗಳು ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಹೋಗುತ್ತವೆ. ಎಚ್-1ಬಿ ವೀಸಾದಾರರ ಸಿಂಹಪಾಲನ್ನು ಭಾರತೀಯರು ಪಡೆದುಕೊಂಡಿದ್ದಾರೆ.
ಗ್ರೀನ್ ಕಾರ್ಡ್ ಹೊಂದಿದರೆ ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಬಹುದಾಗಿದೆ.
ಅದೇ ವೇಳೆ, ವಾಸ್ತವ್ಯ ಸ್ಥಾನಮಾನವನ್ನು ಬಯಸದ ಇನ್ನೂ ಸಾವಿರಾರು ಮಂದಿಯೂ ತಮ್ಮ ಸ್ವದೇಶಕ್ಕೆ ಮರಳಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.
ಕಳೆದ ಎರಡು ತಿಂಗಳುಗಳಲ್ಲಿ ಅಮೆರಿಕದಲ್ಲಿ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೆ, ಅವೆುರಿಕದ ಮೂಲ ಪ್ರಜೆಗಳಿಗಿಂತ ವೀಸಾಗಳನ್ನು ಪಡೆದು ಅಲ್ಲಿಗೆ ಹೋಗಿ ನೆಲೆಸಿರುವ ವಿದೇಶೀಯರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ವೀಸಾದಲ್ಲಿ ಅಮೆರಿಕದಲ್ಲಿರುವ ಉದ್ಯೋಗಿಗಳಿಗೆ ತಾತ್ಕಾಲಿಕ ರಜೆ ನೀಡುವುದು, ಅವರ ವೇತನ ಕಡಿತ ಮಾಡುವುದು ಹಾಗೂ ಮನೆಯಿಂದ ಕೆಲಸ ಮಾಡಲು ಅವರಿಗೆ ಅವಕಾಶ ನೀಡುವುದು ವೀಸಾ ಶರತ್ತುಗಳನ್ನು ಉಲ್ಲಂಘಿಸಿದಂತಾಗುತ್ತದೆ.
ಎಚ್-1ಬಿ ವೀಸಾದಾರರು ಒಂದು ಕೆಲಸದಿಂದ ವಜಾಗೊಂಡರೆ, ಇನ್ನೊಂದು ಕೆಲಸ ಹುಡುಕಲು, ಇನ್ನೊಂದು ವೀಸಾಕ್ಕೆ ವರ್ಗಾವಣೆಗೊಳ್ಳಲು ಅಥವಾ ದೇಶ ತೊರೆಯಲು ಅವರಿಗೆ 60 ದಿನಗಳ ಕಾಲಾವಕಾಶ ಇರುತ್ತದೆ. ವಿದೇಶೀಯರು ತಮ್ಮ ಕೆಲಸಗಳನ್ನು ಕಳೆದುಕೊಳ್ಳದಿದ್ದರೂ, ಈ ಅಸ್ತವ್ಯಸ್ತ ಅವಧಿಯಲ್ಲಿ ಅವರ ವೀಸಾಗಳು ನವೀಕರಣಗೊಳ್ಳದಿದ್ದರೆ ಅವರು ಸಮಸ್ಯೆಗೆ ಸಿಲುಕಬಹುದು.







