ಬೀಗಮುದ್ರೆ 6 ತಿಂಗಳು ಮುಂದುವರಿದರೆ 70 ಲಕ್ಷ ಬಯಸದ ತಾಯ್ತನ: ವಿಶ್ವಸಂಸ್ಥೆ ಎಚ್ಚರಿಕೆ

ವಿಶ್ವಸಂಸ್ಥೆ (ನ್ಯೂಯಾರ್ಕ್), ಎ. 29: ಹೆಚ್ಚಿನ ದೇಶಗಳಲ್ಲಿ ಕೊರೋನ ವೈರಸ್ ಸಂಬಂಧಿ ಬೀಗಮುದ್ರೆ ಇನ್ನೂ ಆರು ತಿಂಗಳು ಮುಂದುವರಿದರೆ, ಗರ್ಭನಿರೋಧಕಗಳ ಕೊರತೆಯಿಂದಾಗಿ ಜಗತ್ತಿನಾದ್ಯಂತ ಸುಮಾರು 70 ಲಕ್ಷ ಮಹಿಳೆಯರು ಬಯಸದೆ ಗರ್ಭಧರಿಸಬಹುದು ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಮಂಗಳವಾರ ಹೇಳಿದೆ.
ಬೀಗಮುದ್ರೆ ಇರುವ ಸಂದರ್ಭದಲ್ಲಿ ಗರ್ಭನಿರೋಧಕಗಳನ್ನು ಪಡೆಯಲು 114 ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ 4.7 ಕೋಟಿ ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ ಎಂದು ನಿಧಿ ತಿಳಿಸಿದೆ.
ಅದೂ ಅಲ್ಲದೆ, 2020 ಮತ್ತು 2030ರ ನಡುವಿನ ಅವಧಿಯಲ್ಲಿ 1.3 ಕೋಟಿ ಹೆಚ್ಚುವರಿ ಬಾಲ್ಯವಿವಾಹಗಳು ನಡೆಯಬಹುದು ಎಂದು ಅದು ಹೇಳಿದೆ.
‘‘ಕೋವಿಡ್-19 ಸಾಂಕ್ರಾಮಿಕವು ಜಗತ್ತಿನಾದ್ಯಂತ ಮಹಿಳೆಯರು ಮತ್ತು ಬಾಲಕಿಯರ ಮೇಲೆ ಶೀಘ್ರದಲ್ಲೇ ಬೀರಬಹುದಾದ ಆಘಾತಕಾರಿ ಪರಿಣಾಮಗಳನ್ನು ಈ ನೂತನ ಅಂಕಿಅಂಶಗಳು ತೋರಿಸುತ್ತವೆ’’ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಕಾರ್ಯಕಾರಿ ನಿರ್ದೇಶಕಿ ನಟಾಲಿಯ ಕಾನಿಮ್ ಹೇಳಿದ್ದಾರೆ.
‘‘ಈ ಸಾಂಕ್ರಾಮಿಕವು ಅಸಮಾನತೆಯನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚುವರಿಯಾಗಿ ಲಕ್ಷಾಂತರ ಮಹಿಳೆಯರು ಮತ್ತು ಬಾಲಕಿಯರು ತಮ್ಮ ಕುಟುಂಬಗಳ ಬಗ್ಗೆ ಯೋಜನೆ ರೂಪಿಸುವ ಹಾಗೂ ತಮ್ಮ ದೇಹಗಳು ಮತ್ತು ಆರೋಗ್ಯವನ್ನು ರಕ್ಷಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ’’ ಎಂದು ಅವರು ಹೇಳಿದರು.







