ದಿಲ್ಲಿ ಹಿಂಸಾಚಾರ: ಎಐಎಸ್‌ಎ ದಿಲ್ಲಿ ಘಟಕದ ಅಧ್ಯಕ್ಷೆಯ ಪೋನ್ ವಶಪಡಿಸಿಕೊಂಡ ಪೊಲೀಸರು
ಹೊಸದಿಲ್ಲಿ, ಎ.29: ಸೋಮವಾರ ತನ್ನ ದಿಲ್ಲಿ ಘಟಕದ ಅಧ್ಯಕ್ಷೆ ಕವಲಪ್ರೀತ್ ಕೌರ್ ಅವರ ಮನೆಗೆ ಭೇಟಿ ನೀಡಿದ್ದ ದಿಲ್ಲಿ ಪೊಲೀಸರು ದಿಲ್ಲಿ ಕೋಮು ಹಿಂಸಾಚಾರದ ಕುರಿತು ತನಿಖೆಯ ನೆಪದಲ್ಲಿ ಅವರ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಿದ್ದಾರೆ ಎಂದು ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಹೇಳಿದೆ.
ಕೌರ್ ಅವರಿಗೆ ನೀಡಿರುವ ಜಪ್ತಿ ನೋಟಿಸಿನಲ್ಲಿ ಕರಾಳ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಸೇರಿದಂತೆ ಹಲವಾರು ಆರೋಪಗಳನ್ನು ಉಲ್ಲೇಖಿಸಲಾಗಿದೆ. ಈ ಭಯೋತ್ಪಾದನೆ ನಿಗ್ರಹ ಕಾನೂನನ್ನು ಸರಕಾರವನ್ನು ಟೀಕಿಸುವ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನು ಬಂಧಿಸುವ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ಫೋನ್ ಅನ್ನು ಜಪ್ತಿ ಮಾಡಿರುವದನ್ನು ಟ್ವಿಟರ್ ಮೂಲಕ ತಿಳಿಸಿರುವ ಕೌರ್,ತನ್ನ ಕಾರ್ಯಗಳನ್ನು ಪ್ರಮುಖವಾಗಿ ಬಿಂಬಿಸಿದ್ದಾರೆ. ‘ನನ್ನ ಫೋನ್ ಅನ್ನು ಜಪ್ತಿ ಮಾಡಿರುವ ದಿಲ್ಲಿ ಪೊಲೀಸರ ಕ್ರಮವು ಅತಿರೇಕದ್ದಾಗಿದೆ ಮತ್ತು ನಮ್ಮೆಲ್ಲರಲ್ಲಿ ಭೀತಿ ಮೂಡಿಸುವ ಪ್ರಯತ್ನವಾಗಿದೆ. ಇಡೀ ವಿಶ್ವವೇ ಲಾಕ್‌ಡೌನ್ ಎದುರಿಸುತ್ತಿರುವಾಗ ಮತ್ತು ಸಾಮೂಹಿಕ ಪ್ರತಿಭಟನೆಗಳನ್ನು ನಡೆಸುವುದು ಹಾಗೂ ಕಾನೂನು ನೆರವು ಪಡೆದುಕೊಳ್ಳುವುದು ಕಷ್ಟವಾಗಿರುವ ಈ ಸಮಯದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದು ತೀರ ಕೆಟ್ಟದ್ದಾಗಿದೆ ’ಎಂದು ಅವರು ಹೇಳಿದ್ದಾರೆ.
ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲ್ಲಿ ನಡೆದಿದ್ದ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಸರಣಿ ಬಂಧನಗಳನ್ನು ನಡೆಸಿರುವ ಪೊಲೀಸರು ಕೆಲವರ ವಿರುದ್ಧ ಯುಎಪಿಎ ಹೇರಿದ್ದಾರೆ.