ಮ್ಯಾಕ್ಸಿಕ್ಯಾಬ್ ವಾಹನಗಳ ಟ್ಯಾಕ್ಸ್ ಮನ್ನಾ ಮಾಡುವಂತೆ ಆಗ್ರಹ
ಭಟ್ಕಳ : ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಆದಾಗಿನಿಂದ ಮ್ಯಾಕ್ಸಿಕ್ಯಾಬ್‍ಗಳು ಸಂಚಾರವನ್ನು ಸ್ಥಗಿತಗೊಳಿಸಿ ನಿಂತು ಕೊಂಡಿದ್ದು ಅವುಗಳ ಟ್ಯಾಕ್ಸ್ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಮ್ಯಾಕ್ಸಿ ಕ್ಯಾಬ್ ಒಕ್ಕೂಟ ಕಾರವಾರ ಇದರ ವತಿಯಿಂದ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಸುಮಾರು 11 ತಾಲೂಕುಗಳಲ್ಲಿ 1500ಕ್ಕೂ ಹೆಚ್ಚು ಕುಟುಂಬಗಳು ಮ್ಯಾಕ್ಸಿ ಕ್ಯಾಬ್‍ಗಳನ್ನೇ ನಂಬಿ ಬದುಕು ಸಾಗಿಸುತ್ತಿರುವಲ್ಲಿ ಎಕಾಎಕಿ ಲಾಕ್‍ಡೌನ್ ಆಗಿರುವುದರಿಂದ ವ್ಯವಹಾರವಿಲ್ಲದೇ ಕಂಗಾಲಾಗಿದ್ದು ಸರಕಾರ ನಮ್ಮ ನೆರವಿಗೆ ಬರಬೇಕಾಗಿದೆ. ಹಲವರು ರಾಷ್ಟ್ರೀಕೃತ ಬ್ಯಾಂಕುಗಳಿಂದ, ಸಹಕಾರಿ ಬ್ಯಾಂಕುಗಳಿಂದ ಸಾಲ ಮಾಡಿ ಮಾಕ್ಸಿ ಕ್ಯಾಬ್ ಖರೀದಿಸಿ ಉದ್ಯೋಗ ಮಾಡುತ್ತಿದ್ದು ಅಂತವರ ಬದುಕು ಇಂದು ದುಸ್ತರವಾಗಿದೆ. ಒಂದೆಡೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದು, ಇನ್ನೊಂದೆಡೆ ಆಗಿರುವ ನಷ್ಟವನ್ನು ತುಂಬಿಕೊಳ್ಳುವುದು ಎರಡೂ ಕೂಡಾ ಕಷ್ಟಕರವಾಗಿದ್ದು ಸರಕಾರ ನಮ್ಮ ನೆರವಿಗೆ ಬರಬೇಕಾಗಿದೆ. ತಕ್ಷಣ ಸಾರಿಗೆ ಇಲಾಖೆಗೆ ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಆದ ದಿನದಿಂದ ಮುಂದೆ ಸಂಪೂರ್ಣ ತೆರವುಗೊಳಿಸುವ ತನಕ ನಮ್ಮ ಮ್ಯಾಕ್ಸಿಕ್ಯಾಬ್ ಹಾಗೂ ಇತರೇ ಟೆಂಪೋಗಳ ಟ್ಯಾಕ್ಸ್ ಮನ್ನಾ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.





