ಮಿಝೋರಾಂ ಯುವಕನ ಮೃತದೇಹ ಹಸ್ತಾಂತರಿಸಲು ಚೆನ್ನೈನಿಂದ 3 ಸಾವಿರ ಕಿ.ಮೀ. ಪ್ರಯಾಣ
ಆ್ಯಂಬುಲೆನ್ಸ್ ಚಾಲಕರ ಹೃದಯವಂತಿಕೆಗೆ ಮಾರುಹೋದ ಮಿಝೋರಾಂ ಜನತೆ

ಐಝ್ವಲ್, ಎ. 28: ಹೃದಯಾಘಾತದಿಂದಾಗಿ ಚೆನ್ನೈನಲ್ಲಿ ಅಸುನೀಗಿದ ಮಿಝೋ ಯುವಕನೊಬ್ಬನ ಮೃತದೇಹವನ್ನು ಆತನ ಕುಟುಂಬಿಕರಿಗೆ ಹಸ್ತಾಂತರಿಸಲು ಮಿಝೋರಾಂ ರಾಜಧಾನಿ ಐಝ್ವಾಲ್‌ವರೆಗೆ ಸುಮಾರು 3 ಸಾವಿರ ಕಿ.ಮೀ. ಆ್ಯಂಬುಲೆನ್ಸ್‌ನಲ್ಲಿ ಪ್ರಯಾಣಿಸಿದ ತಮಿಳುನಾಡಿನ ಇಬ್ಬರು ಆ್ಯಂಬುಲೆನ್ಸ್ ಚಾಲರು, ಮಿಝೋರಾಮ್ ಜನತೆಯ ಪಾಲಿಗೆ ‘ರಿಯಲ್ ಹೀರೋ’ಗಳೆನಿಸಿದ್ದಾರೆ.
ಶೋಕತಪ್ತ ಕುಟುಂಬಿಕರು, ಗ್ರಾಮಸ್ಥರು ಚಾಲಕರ ಮಾನವೀಯ ಸೇವೆಗೆ ಕೃತಜ್ಞತೆ ಅರ್ಪಿಸಿದ್ದಾರೆ. ಯುವಕನ ಮೃತದೇಹವಿರುವ ಶವಪೆಟ್ಟಿಗೆಯನ್ನು ಹೊತ್ತ ಆ್ಯಂಬುಲೆನ್ಸ್ ಐಝ್ವ್‌ಲ್‌ನ ನಿರ್ಜನ ರಸ್ತೆಗಳಲ್ಲಿ ಹಾದುಹೋಗುತ್ತಿರುವಾಗ ಜನರು ತಮ್ಮ ನಿವಾಸಗಳಿಂದ ಹೊರಬಂದು ಚಾಲಕರಿಗೆ ಚಪ್ಪಾಳೆ ತಟ್ಟಿ ಕೃತಜ್ಞತೆ ಅರ್ಪಿಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
‘‘ನಿಜ ಜೀವನದ ಹೀರೋಗಳನ್ನು ಮಿಝೋರಾಂ ಸ್ವಾಗತಿಸುವುದು ಹೀಗೆ. !. ಯಾಕೆಂದರೆ ನಾವು ಮಾನವತೆ ಹಾಗೂ ರಾಷ್ಟ್ರೀಯತೆಯಲ್ಲಿ ನಂಬಿಕೆಯಿಟ್ಟಿದ್ದೇವೆ’’ ಎಂದು ಮುಖ್ಯಮಂತ್ರಿ ಝಾರಾಮ್‌ತಂಗಾ ಟ್ವೀಟಿಸಿದ್ದಾರೆ.
ದಯಾಳು ಹಾಗೂ ಪರೋಪಕಾರಿಗಳಿಗೆ ಮಿಝೋಗಳ ಹೃದಯ ಹೇಗೆ ಮಿಡಿಯುತ್ತದೆಯೆಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ನಿಮಗೆ ಹೃದಯಾಳದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ ಎಂದು ರೆರಾಮ್‌ತಂಗಾ ಟ್ವೀಟಸಿದ್ದಾರೆ.





