ಲಾಕ್‍ಡೌನ್: ಬೋಳಂಗಡಿ ಪತ್ರಿಕಾ ವಿತರಕನಿಂದ ತರಕಾರಿ ಕಿಟ್ ವಿತರಣೆ

ಬಂಟ್ವಾಳ, ಎ. 29: ಕೊರೋನ ವೈರಸ್ ಹಬ್ಬುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದ ಸಂಕಷ್ಟಲ್ಲಿರುವ ಸರ್ವ ಧರ್ಮಗಳ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತಾಲೂಕಿನ ಮೆಲ್ಕಾರ್ ಸಮೀಪದ ಬೋಳಂಗಡಿ ಯಲ್ಲಿರುವ ಎಂ.ಎಚ್. ಸ್ಟೋರ್ ಮಾಲಕ, ಪತ್ರಿಕಾ ವಿತರಕ ಎಂ.ಎಚ್. ಮುಸ್ತಫ ಅವರು ತರಕಾರಿ ಕಿಟ್‍ಗಳನ್ನು ವಿತರಿಸಿದ್ದಾರೆ.
ಬೋಳಂಗಡಿ ಮತ್ತು ಬೊಂಡಾಲ ಪರಿಸರದ ಸರ್ವ ಧರ್ಮಗಳ 325 ಕುಟುಂಬಗಳಿಗೆ ತಲಾ ಸುಮಾರು 300 ರೂಪಾಯಿಯ ತರಕಾರಿಗಳಿರುವ ಕಿಟ್‍ಗಳನ್ನು ವಿತರಿಸಿದ್ದಾರೆ. ಕಿಟ್‍ನಲ್ಲಿ ಆಲುಗೆಡ್ಡೆ, ಟೊಮೆಟೊ, ಸೌತೆ, ಮೆಣಸು, ಶುಂಠಿ, ಕ್ಯಾರೆಟ್, ಬೀಟ್‍ರೋಟ್, ಮುಳ್ಳುಸೌತೆ, ಕೊತಂಬರಿ ಸೊಪ್ಪು, ಸುವರ್ಣಗೆಡ್ಡೆ ಸಹಿತ 9 ಕೆ.ಜಿ. ತರಕಾರಿಗಳು ಕಿಟ್‍ನಲ್ಲಿ ಇವೆ.
ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವಿವಿಧ ಸಂಘ ಸಂಸ್ಥೆಗಳು ಅಕ್ಕಿ ಸಹಿತ ದಿನಸಿ ಸಾಮಗ್ರಿಗಳನ್ನು ಈಗಾಗಲೇ ವಿತರಿಸಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅವರವರ ಕೈಲಾದಷ್ಟು ಸ್ಪಂದಿಸುವುದು ಪುಣ್ಯದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬೋಳಂಗಡಿ ಮತ್ತು ಬೊಂಡಾಲ ಪರಿಸರದ ಮುಸ್ಲಿಮ್, ಹಿಂದೂ, ಕ್ರಿಶ್ಚಿಯನ್ ಧರ್ಮಗಳ 325 ಕುಟುಂಬಗಳಿಗೆ ಅಂದಾಜು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ತರಕಾರಿ ಕಿಟ್‍ಗಳನ್ನು ವಿತರಿಸಲಾಗು ತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರೂ ಆಗಿರುವ ಮುಸ್ತಫ ತಿಳಿಸಿದ್ದಾರೆ.








