ಬೆಂಗಳೂರಿನಲ್ಲಿ ಮೊದಲ ಸಂಚಾರಿ ಎಟಿಎಂಗೆ ಪೊಲಿಸ್ ಆಯುಕ್ತರಿಂದ ಚಾಲನೆ

ಬೆಂಗಳೂರು, ಎ.29: ಲಾಕ್‍ಡೌನ್ ಹಿನ್ನೆಲೆ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಒದಗಿಸಲು ಫೆಡರಲ್ ಬ್ಯಾಂಕ್ ಮುಂದಾಗಿದ್ದು, ಬೆಂಗಳೂರಿಗೆ ಮೊದಲ ಸಂಚಾರಿ ಎಟಿಎಂಗೆ ನಗರ ಪೊಲಿಸ್ ಆಯುಕ್ತ ಭಾಸ್ಕರ್ ರಾವ್ ಬುಧವಾರ ಚಾಲನೆ ನೀಡಿದರು.
ಮನೆಯೊಳಗೇ ಇದ್ದು ಕೋವಿಡ್-19 ವಿರುದ್ಧ ಹೋರಾಡಲು ನೆರವಾಗುವ ಗುರಿಯೊಂದಿಗೆ ಫೆಡರಲ್ ಬ್ಯಾಂಕ್ ಇತ್ತೀಚಿಗಷ್ಟೇ ಚೆನ್ನೈ, ಮುಂಬೈ ನಗರಗಳಲ್ಲಿ ಸಂಚಾರಿ ಎಟಿಎಂ ಸೇವೆ ಆರಂಭಿಸಿತ್ತು. ಈ ಯೋಜನೆಯಿಂದ ಜನರಿಗೆ ಹೆಚ್ಚಿನ ಉಪಯೋಗ ಆಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲೂ ಸಂಚಾರಿ ಎಟಿಎಂ ಸೇವೆ ಪ್ರಾರಂಭಿಸಲಾಗಿದೆ.
ಯಾವುದೇ ಬ್ಯಾಂಕಿನ ಗ್ರಾಹಕರು ಈ ಎಟಿಎಂಗಳಲ್ಲಿ ಉಚಿತವಾಗಿ ನಗದು ಹಣ ಪಡೆದುಕೊಳ್ಳಬಹುದು. ತಮಗಾಗಿ ಅಥವಾ ತಮ್ಮ ನೆರೆಯವರಿಗಾಗಿ ಈ ಸೌಲಭ್ಯದ ಸೇವೆಯನ್ನು ಪಡೆಯಲಿಚ್ಛಿಸುವ ಗ್ರಾಹಕರು ಬೆಂಗಳೂರಿನಲ್ಲಿರುವ ಫೆಡರಲ್ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ.
ಚಾಲನೆ ವೇಳೆ ಫೆಡರಲ್ ಬ್ಯಾಂಕ್ ಉಪಾಧ್ಯಕ್ಷ ಎನ್. ರಾಜ ನಾರಾಯಣನ್, ಪ್ರಾದೇಶಿಕ ಮುಖ್ಯಸ್ಥರಾದ ರೆಂಜಿ ಅಲೆಕ್ಸ್, ಕೆ.ಪ್ರದೀಪ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







