ಇರ್ಫಾನ್: ಭಾರತೀಯ ಚಿತ್ರರಗದ ಅಪ್ರತಿಮೆ ಪ್ರತಿಭೆ
ಸಲಾಂ ಬಾಂಬೆನಿಂದ ಆಂಗ್ರೇಝಿ ಮೀಡಿಯಂವರೆಗೆ
ಹೊಸದಿಲ್ಲಿ,ಎ. 9: ಬಾಲಿವುಡ್ ಕಂಡಮೇರುನಟರಲ್ಲೊಬ್ಬರಾದ ಇರ್ಫಾನ್ ಖಾನ್ ಅವರ ನಿಧನದೊಂದಿಗೆ ಭಾರತೀಯ ಚಿತ್ರರಂಗವು ಓರ್ವ ಅಪ್ರತಿಮ ನಟನನ್ನು ಕಳೆದುಕೊಂಡಿದೆ.
ಸಲಾಂ ಬಾಂಬೆನಿಂದ ಹಿಡಿದು ಆಂಗ್ರೇಜಿ ಮೀಡಿಯಂವರೆಗೆ ವೈವಿಧ್ಯಮಯ ಪಾತ್ರಗಳ ಮೂಲಕ ಚಿತ್ರರಸಿಕರ ಮನಸೂರೆಗೊಂಡ ಇರ್ಫಾನ್ ಖಾನ್ ಈಗ ಬರೀ ನೆನಪು ಮಾತ್ರ.
ಜೈಪುರದ ಟೊಂಕ್ ಸಮೀಪದ ಗ್ರಾಮವೊಂದರಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಶೆಹಝಾದೆ ಇರ್ಫಾನ್ ಅಲಿ ಖಾನ್ ಅವರ ತಂದೆ ಯಾಸೀನ್ ಅಲಿ ಖಾನ್ ಹಾಗೂ ತಾಯಿ ಸಯೀದಾ ಬೇಗಂ. ಇರ್ಫಾನ್ ಅವರ ತಾಯಿ ಸಯೀದಾ ರಾಜಮನೆತನದ ಕುಟುಂಬಕ್ಕೆ ಸೇರಿದವರಾಗಿದ್ದರು. ರಾಜಸ್ಥಾನದ 23 ವರ್ಷದೊಳಗಿನ ಕ್ರಿಕೆಟ್ ತಂಡದ ಆಟಗಾರನಾಗಿಯೂ ತನ್ನ ಕ್ರೀಡಾಪ್ರತಿಭೆಯನ್ನು ಪ್ರದರ್ಶಿಸಿದ್ದರು. ತನ್ನ ಮೂವರು ಒಡಹುಟ್ಟಿದವರಲ್ಲಿ ಹಿರಿಯವನಾದ ತನ್ನ ತಂದೆಯ ನಿಧನದ ಬಳಿಕ ದಿಲ್ಲಿ ರಾಷ್ಟ್ರೀಯ ಕಲಾ ಶಾಲೆ (ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ)ಗೆ ಸೇರ್ಪಡಗೊಂಡು, ಪದವಿ ಪಡೆದಿದ್ದರು.
ಆನಂತರ ಮುಂಬೈಯಲ್ಲಿ ಅವಕಾಶ ಅರಸಿ ಬಂದ ಇರ್ಫಾನ್ ಹಲವಾರು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದರು.
ಶ್ಯಾಮ್ಬೆನೆಗಲ್ ಅವರ ಭಾರತ್ ಏಕ್ ಖೋಜ್ (1988-89),ಗೋವಿಂದ ನಿಹಾಲಿನಿ ನಿರ್ಮಾಣದ ಟಿವಿ ಚಿತ್ರ ದಾಝೀರೆ (1991), ಪಿತಾ (1991) , ಚಾಣಕ್ಯ (1992), ಚಂದ್ರಕಾಂತ (1994) ಇರ್ಫಾನ್ ಅಭಿನಯಿಸಿದ್ದ ಕೆಲವು ಜನಪ್ರಿಯ ಟಿವಿ ಧಾರಾವಾಹಿಗಳಾಗಿದ್ದವು.
ಇರ್ಫಾನ್ನಲ್ಲಿ ರಕ್ತಗತವಾಗಿದ್ದ ನಟನಾ ಪ್ರತಿಭೆಯನ್ನು ಮೊದಲು ಗುರುತಿಸಿದವರು ಖ್ಯಾತ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್. ತನ್ನ ನಿರ್ದೇಶನದ ಸಲಾಂ ಮುಂಬೈ ಚಿತ್ರದಲ್ಲಿ ಮೀರಾ ನಾಯರ್ ಅವರು ಇರ್ಫಾನ್ ಖಾನ್ಗೆ ಅವಕಾಶ ನೀಡಿದರು. ಚಿತ್ರದಲ್ಲಿ ಇರ್ಫಾನ್ ಅವರ ವೃತ್ತಿಪರ ಪತ್ರಬರಹಗಾರನ ಪಾತ್ರವು ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಚಿತ್ರ ಅಪಾರ ಪ್ರಶಂಸೆಯನ್ನು ಪಡೆಯಿತು. ಆನಂತರ ಇರ್ಫಾನ್ ಮೀರಾ ನಾಯರ್ ನಿರ್ದೇಶನದ ನೇಮ್ಸೇಕ್, ಕಿರುಚಿತ್ರ ಮೈಗ್ರೇಶನ್ (2007)ಗಳಲ್ಲಿ ನಟಿಸಿದರು. 2008ರಲ್ಲಿ ತೆರೆಕಂಡ ಮೀರಾನಾಯರ್ ಅವರ ನ್ಯೂಯಾರ್ಕ್, ಐ ಲವ್ಯೂ ಸರಣಿ ಚಿತ್ರಗಳಲ್ಲೂ ಇರ್ಫಾನ್ ಗಮನಸೆಳೆದಿದ್ದಾರೆ.
ತಿಗಾಂಶು ಧುಲಿಯಾ ನಿರ್ದೇಶನದ ಚರಸ್ ಚಿತ್ರದಲ್ಲಿನ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ, ಹಾಸಿಲ್ ಚಿತ್ರದಲ್ಲಿ ವಿದ್ಯಾರ್ಥಿ ಒಕ್ಕೂಟದ ನಾಯಕನಾಗಿ ಇರ್ಫಾನ್ ಅಭಿನಯವು ಇಂದಿಗೂ ಬಾಲಿವುಡ್ ಪ್ರೇಕ್ಷಕರ ಮನದಲ್ಲಿ ಹಸಿರಾಗಿದೆ.
ಆನಂತರ 2012ರಲ್ಲಿ ಬಂದ ಪಾನ್ ಸಿಂಗ್ ಥೋಮಾರ್ ಇರ್ಫಾನ್ ಅವರ ಚಿತ್ರ ಬದುಕಿನಲ್ಲಿ ಮೈಲುಗಲ್ಲಾಯಿತು. ಢಕಾಯಿತನಾಗಿ ಬದಲಾಗುವ ಕ್ರೀಡಾಪಟುವಿನ ನೈಜ ಕಥೆಯನ್ನು ಆಧರಿಸಿದ ಈ ಬಯೋಪಿಕ್ಚಿತ್ರದ ನಟನೆಗಾಗಿ ಇರ್ಫಾನ್ಗೆ ರಾಷ್ಟ್ರಮಟ್ಟದ ಶ್ರೇಷ್ಠ ನಟ ಪುರಸ್ಕಾರ ಲಭಿಸಿತ್ತು. ಇಂದಿಗೂ ಈ ಚಿತ್ರವು ಭಾರತದ ಅತ್ಯುತ್ತಮ ಕ್ರೀಡಾ ಕಥೆಯಾಧಾರಿತ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೀಪಿಕಾ ಪಡುಕೋಣೆ ನಾಯಕಿಯಾಗಿರವ ಶೂಜಿತ್ ಸರ್ಕಾರ್ ನಿರ್ದೇಶನದ ಪೀಕೂ (2017) , ಇರ್ಫಾನ್ ಅಭಿನಯ ಪ್ರತಿಭೆಗೆ ಇನ್ನೊಂದು ಸಾಕ್ಷಿಯಾದ ಚಿತ್ರವಾಗಿದೆ. ಹಾಗೆಯೇ ತನುಜಾ ಚಂದ್ರ ಅವರ ಖರೀಬ್ ಖರೀಬ್ ಸಿಂಗಲ್ (2017), ಅಕಾಶ್ ಖುರಾನಾ ನಿರ್ದೇಶನದ ಕ್ಯಾರವಾನ್ (2018) , ಹಿಂದಿ ಮೀಡಿಯಂ (2018)ಚಿತ್ರದಲ್ಲಿಯೂ ಇರ್ಫಾನ್ ಪಾತ್ರವು ಪ್ರೇಕ್ಷಕರ ಮನಸೂರೆಗೊಂಡಿತ್ತು.
ಹಾಲಿವುಡ್ನಲ್ಲೂ ಇರ್ಫಾನ್ ಮೋಡಿ
ಇರ್ಫಾನ್ ಅಭಿನಯ ಪ್ರತಿಭೆಯು ಹಾಲಿವುಡ್ ಚಿತ್ರರಂಗವನ್ನೂ ಮೋಡಿ ಮಾಡಿತ್ತು. ಇರ್ಫಾನ್ ಅಭಿನಯದ ಚೊಚ್ಚಲ ಹಿಂದಿ ಚಿತ್ರ ಸಲಾಂ ಬಾಂಬೆನ ಬೆನ್ನಲ್ಲೇ ತೆರೆಕಂಡ ಆಂಗ್ಲ ಚಿತ್ರ ‘ದಿ ವಾರಿಯರ್’ (2001) ಮೂಲಕ ಇರ್ಫಾನ್ ಹಾಲಿವುಡ್ ಪ್ರೇಕ್ಷಕರಿಗೂ ಪರಿಚಿತರಾದರು. ದಿ ನೇಮ್ಸೇಕ್ (2006), ದಿ ಡಾರ್ಜಿಲಿಂಗ್ ಲಿಮಿಟೆಡ್ (2007) ಇಂಗ್ಲೀಷ್ ಚಿತ್ರಗಳು ಇರ್ಫಾನ್ರನ್ನು ಹಾಲಿವುಡ್ ಗುರುತಿಸುವಂತೆ ಮಾಡಿತ್ತು. 2008ರಲ್ಲಿ ಬಿಡುಗಡೆಯಾದ ಆಸ್ಕರ್ ಪುರಸ್ಕೃತ ಚಿತ್ರ ಸ್ಲಂಡಾಗ್ ಮಿಲಿಯನೇರ್ ಚಿತ್ರದ ಬಳಿಕ ಇರ್ಫಾನ್ಗೆ ಹಾಲಿವುಡ್ನಲ್ಲಿ ಅವಕಾಶಗಳ ಬಾಗಿಲುಗಳು ತೆರೆದುಕೊಂಡವು. ದಿ ಅಮೇಝಿಂಗ್ ಸ್ಪೈಡರ್ ಮ್ಯಾನ್, ಲೈಫ್ ಆಫ್ ಪೈ, ಜುರಾಸಿಕ್ ವರ್ಲ್ಡ್ ಹಾಗೂ ಇನ್ಫೆರ್ನೊದಂತಹ ಭಾರೀ ವೆಚ್ಚದ ಹಾಲಿವುಡ್ ಚಿತ್ರಗಳಲ್ಲಿ ಅವರು ನಟಿಸಿದ್ದರು. ಆದಾಗ್ಯೂ ಇರ್ಫಾನ್ ಬಳಿ ಅಂತಾರಾಷ್ಟ್ರೀಯ ನಟನೆಂಬ ಅಹಮಿಕೆ ಎಂದೂ ಸುಳಿದಿರಲಿಲ್ಲ. ಹಾಲಿವುಡ್ನಲ್ಲಿ ನಿರಂತರ ಅವಕಾಶಗಳ ನಡುವೆಯೂ ಇರ್ಫಾನ್ ಬಾಲಿವುಡ್ ಚಿತ್ರಗಳಿಗೆ ನಟಿಸಲು ಕಾಲ್ಶೀಟ್ ನೀಡುತ್ತಿದ್ದರು.
ಆದರೆ ಇರ್ಫಾನ್ ಜನಪ್ರಿಯತೆಯ ತುತ್ತತುದಿಯಲ್ಲಿರುವಾಗಲೇ ಅವರ ಬದುಕಿನಲ್ಲಿ ಬರಸಿಡಿಲೆರಗಿತು. ನ್ಯೂ ಎಂಡೊಕ್ರೈನ್ ಟ್ಯೂಮರ್ ಎಂಬ ಅತ್ಯಂತ ಅಪರೂಪದ ಕ್ಯಾನ್ಸರ್ ಕಾಯಿಲೆ ಅವರಿಗೆ ತಗಲಿರುವುದು ಪತ್ತೆಯಾಗಿತ್ತು. ಬ್ರಿಟನ್ನಲ್ಲಿ ನಾಲ್ಕೈದು ತಿಂಗಳು ಚಿಕಿತ್ಸೆ ಪಡೆದು ಸ್ವದೇಶಕ್ಕೆ ವಾಪಾಸಾದ ಬಳಿಕ ಇರ್ಫಾನ್ ಆಂಗ್ರೇಝಿ ಮೀಡಿಯಂ ಚಿತ್ರದಲ್ಲಿ ನಟಿಸಿದ್ದರು. ಹಿಂದಿ ಮೀಡಿಯಂನ ಸೀಕ್ವೆಲ್ ಆದ ಈ ಚಿತ್ರವು ಮಾರ್ಚ್ 13ರಂದು ಬಿಡುಗಡೆಯಾಗಿತ್ತು. ಅನಾರೋಗ್ಯದ ನಡುವೆಯೂ ಇರ್ಫಾನ್ ಅವರ ಅದ್ವಿತೀಯ ನಟನೆ ಅವರೊಬ್ಬ ಹುಟ್ಟು ಕಲಾವಿದ ಎಂಬುದನ್ನು ಸಾಬೀತುಪಡಿಸಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಮಂಗಳವಾರ ಹಠಾತ್ತನೆ ಅವರ ಅನಾರೋಗ್ಯ ಉಲ್ಬಣಿಸಿ, ಚಿರನಿದ್ರೆಗೆ ಸರಿದರು.
ಬ್ರಿಟನ್ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವಾಗ ಅವರು ಸುದ್ದಿಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಆಡಿತ ಮಾತು ಅವರ ಬದುಕಿನ ಏಳು-ಬೀಳಿನಲ್ಲಿಯೂ ಅವರ ಸ್ಥಿತಿಪ್ರಜ್ಞತೆಗೆ ಸಾಕ್ಷಿಯಾಗಿತ್ತು. ‘‘ ಈ ಹಠಾತ್ತನೆ ಏರಗಿ ಬಂದ ಅನಾರೋಗ್ಯವು, ನಾವು ಸಾಗರದಲ್ಲಿ ಅನಿಶ್ಚಿತ ಅಲೆಗಳ ನಡುವೆ ಬಾಟಲಿಯ ಮುಚ್ಚಳದಂತೆ ಮತ್ತು ನೀವು ಈ ಹೆದ್ದೆರೆಗಳನ್ನು ಹತಾಶೆಯಿಂದ ನಿಯಂತ್ರಿಸಲು ಯತ್ನಿಸುತ್ತೀರಿ’’ ಎಂಬ ಸತ್ಯವು ಮನದಟ್ಟಾಗುತ್ತದೆ ಎಂದಿದದರು.