ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ: ಮುನಿರತ್ನ ಮನವಿ ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು, ಎ.29: ನಕಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ಮೂಲ ವಾದಪತ್ರದ ಆರೋಪದಿಂದ ನನ್ನನ್ನು ಕೈಬಿಡಬೇಕು ಎಂಬ ಮುನಿರತ್ನ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ಕುರಿತು ಪರಾಜಯ ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರಾಜುಗೌಡ ಸೋಲನ್ನು ಅನುಭವಿಸಿದ್ದರು. ಹೀಗಾಗಿ, ಮುನಿರಾಜುಗೌಡ ಅವರು ನಕಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಅರ್ಜಿದಾರರು ಪ್ರತಿವಾದಿಗಳ ಮಧ್ಯಂತರ ಅರ್ಜಿಗಳ ಮೇಲೆ ಕಾಯ್ದಿರಿಸಿದ ಆದೇಶವನ್ನು ಪ್ರಕಟಿಸಿ, ಮುನಿರತ್ನ ಅವರ ಮನವಿಯನ್ನು ತಿರಸ್ಕರಿಸಿದೆ.
ಮುನಿರಾಜುಗೌಡ ಅವರು ತಮ್ಮ ಚುನಾವಣಾ ತಕರಾರು ಅರ್ಜಿಯ ವಾದ ಪತ್ರದ ತಿದ್ದುಪಡಿಗೆ ಕೋರಿದ್ದ ಮಧ್ಯಂತರ ಅರ್ಜಿ ಮತ್ತು ಹಲವು ಹೊಸ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಇದೇ ವೇಳೆ ಪುರಸ್ಕರಿಸಿದೆ. ಆದರೆ, ಮೂಲ ಅರ್ಜಿಯಲ್ಲಿ ಮುನಿರಾಜುಗೌಡ ಅವರು, ನನ್ನನ್ನೇ ಚುನಾಯಿತ ಅಭ್ಯರ್ಥಿ ಎಂದು ಘೋಷಿಸಲು ನಿರ್ದೇಶಿಸಬೇಕು ಎಂಬ ಮನವಿಯನ್ನು ತಿರಸ್ಕರಿಸಿದೆ.







