ಉಳಿಯಲಿದೆಯೇ ಉದ್ಧವ್ ಠಾಕ್ರೆ ಸಿಎಂ ಪಟ್ಟ ?

ಮುಂಬೈ, ಎ.30: ಯಾವುದೇ ಸದನದ ಸದಸ್ಯರಲ್ಲದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಮೇಲ್ಮನೆಗೆ ನಾಮಕರಣ ಮಾಡುವಂತೆ ಮಹಾರಾಷ್ಟ್ರ ಸಚಿವ ಸಂಪುಟ ರಾಜ್ಯಪಾಲರನ್ನು ಆಗ್ರಹಿಸಿ 15 ದಿನಗಳ ಬಳಿಕ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಈ ಬಗ್ಗೆ ಅಟರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ಸಲಹೆ ಕೇಳಿದ್ದಾರೆ.
ಈ ಸಂಬಂಧ ಠಾಕ್ರೆಯವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ತಮ್ಮನ್ನು ಮೇಲ್ಮನೆಗೆ ನೇಮಕ ಮಾಡಲು ಕೋಶ್ಯಾರಿಯವರು ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಸಂಕಷ್ಟದಿಂದ ಬಚಾವ್ ಆಗಲು ಮುಖ್ಯಮಂತ್ರಿಯವರು ಪ್ರಧಾನಿ ನರೇಂದ್ರ ಮೋದಿಯವರ ಬಾಗಿಲು ಬಡಿದಿದ್ದಾರೆ ಎಂದು ಎನ್‌ಸಿಪಿ ಸಚಿವರೊಬ್ಬರು ಬಹಿರಂಗಪಡಿಸಿದ್ದಾರೆ. ಮೇಲ್ಮನೆಗೆ ನೇಮಕ ಮಾಡುವ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳದಿದ್ದರೆ, ಮುಖ್ಯಮಂತ್ರಿ ಹುದ್ದೆಯನ್ನು ಠಾಕ್ರೆ ತ್ಯಜಿಸಬೇಕಾಗುತ್ತದೆ ಎನ್ನುವುದನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಕೋಶ್ಯಾರಿಯವರಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮೋದಿಯವರಿಗೆ ನೇರವಾಗಿ ಕರೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯಪಾಲರ ಕೋಟಾದಡಿ ಠಾಕ್ರೆಯವರನ್ನು ನೇಮಕ ಮಾಡುವಂತೆ ಸಚಿವ ಸಂಪುಟ ಎಪ್ರಿಲ್ 9ರಂದು ರಾಜ್ಯಪಾಲರನ್ನು ಆಗ್ರಹಿಸಿತ್ತು. ಮಂಗಳವಾರ ಇದನ್ನು ಪುನರುಚ್ಚರಿಸಿದೆ.
ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ಅವರ ನೇತೃತ್ವದ ನಿಯೋಗ ಕೋಶ್ಯಾರಿಯವರನ್ನು ಈ ಸಂಬಂಧ ಭೇಟಿ ಮಾಡಿದ ಸಂದರ್ಭ, ಅಟಾರ್ನಿ ಜನರಲ್ ಅವರ ಅಭಿಪ್ರಾಯ ಪಡೆಯುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.







