ಬಡವರ ನೆರವಿಗೆ 65,000 ಕೋ.ರೂ.ಅಗತ್ಯವಿದೆ: ರಘುರಾಮ್ ರಾಜನ್

ಹೊಸದಿಲ್ಲಿ, ಎ.30: ದೇಶವ್ಯಾಪಿ ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಭಾರತದಲ್ಲಿನ ಬಡವರಿಗೆ ನೆರವಾಗಲು ಸುಮಾರು 65,000 ಕೋ.ರೂ.ಗಳ ಅಗತ್ಯವಿದೆ ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ಆರ್‌ಬಿಐನ ಮಾಜಿ ಗವರ್ನರ್ ರಘುರಾಮ ರಾಜನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜೊತೆಗೆ ವೀಡಿಯೊ ಸಂವಾದದ ವೇಳೆ ಹೇಳಿದ್ದಾರೆ. ಕೊರೋನ ವೈರಸ್ ಬಿಕ್ಕಟ್ಟು ಅಂತ್ಯಗೊಂಡ ಬಳಿಕ ಮರುಚೇತರಿಕೆಗೆ ಅನುಸರಿಸಬೇಕಾದ ಮಾರ್ಗಗಳನ್ನು ರೂಪಿಸಲು ಬುದ್ಧಿಜೀವಿಗಳೊಂದಿಗೆ ರಾಹುಲ್ ಹಮ್ಮಿಕೊಂಡಿರುವ ವೀಡಿಯೊ ಸಂವಾದ ಸರಣಿಯಲ್ಲಿ ಮೊದಲನೆಯದಾದ ಈ ವೀಡಿಯೊವನ್ನು ಕಾಂಗ್ರೆಸ್ ಗುರುವಾರ ಬಿಡುಗಡೆಗೊಳಿಸಿದೆ.
ಆರ್ಥಿಕತೆಯ ಮೇಲೆ ಕೊರೋನ ವೈರಸ್ ಪಿಡುಗಿನ ಪರಿಣಾಮದ ಕುರಿತು ಮಾತನಾಡಿದ ರಾಜನ್,ಸುದೀರ್ಘ ಲಾಕ್‌ಡೌನ್ ಆರ್ಥಿಕತೆಯ ಸ್ಥಿರತೆಗೆ ಪೂರಕವಲ್ಲ ಎಂದರು.
ಬಡವರಿಗೆ ನೆರವಾಗಲು ನಮಗೆ ಎಷ್ಟು ಹಣ ಅಗತ್ಯವಾಗಬಹುದು ಎಂಬ ರಾಹುಲ್ ಪ್ರಶ್ನೆಗೆ ‘ನಮಗೆ 65,000 ಕೋ.ರೂ.ಗಳು ಬೇಕು,ಇದು ಅಷ್ಟೊಂದು ದೊಡ್ಡ ಮೊತ್ತವೇನಲ್ಲ. ಇದು ನಮ್ಮ ದೇಶದ ಬಡವರನ್ನು ರಕ್ಷಿಸಲು ಅಗತ್ಯವಾಗಿದೆ’ ಎಂದು ರಾಜನ್ ಉತ್ತರಿಸಿದರು.
ಲಾಕ್‌ಡೌನ್ ಶಾಶ್ವತವಾಗಿ ಹೊಂದಿರುವುದು ಸುಲಭ,ಆದರೆ ಅದು ಆರ್ಥಿಕತೆಯ ಸ್ಥಿರತೆಗೆ ಪೂರಕವಲ್ಲ ಎಂದ ರಾಜನ್,ಲಾಕ್‌ಡೌನ್ ಅನ್ನು ನಾವು ಜಾಣತನದಿಂದ ಹಿಂದೆಗೆದುಕೊಳ್ಳಬೇಕಿದೆ. ಸುದೀರ್ಘ ಕಾಲ ಜನರ ಹೊಟ್ಟೆ ತುಂಬಿಸುವ ಸಾಮರ್ಥ್ಯ ಭಾರತಕ್ಕಿಲ್ಲ. ಹೀಗಾಗಿ ಪೂರ್ವ ನಿರ್ಧರಿತ ರೀತಿಯಲ್ಲಿ ನಾವು ಲಾಕ್‌ಡೌನ್ ಅನ್ನು ತೆರವುಗೊಳಿಸಬೇಕಿದೆ. ಹೊಸ ಕೋವಿಡ್-19 ಪ್ರಕರಣಗಳು ವರದಿಯಾದರೆ ಅವರನ್ನು ಪ್ರತ್ಯೇಕಿಸಲು ಸಾಧ್ಯವಾಗುವಂತೆ ನಾವು ಲಾಕ್‌ಡೌನ್ ಹಿಂದೆಗೆತವನ್ನು ನಿರ್ವಹಿಸಬೇಕಿದೆ ಎಂದು 30 ನಿಮಿಷಗಳ ಅವಧಿಯ ಸಂವಾದದಲ್ಲಿ ಅವರು ಹೇಳಿದರು.







