ಗುಟ್ಕಾ ಮಾದರಿಯಲ್ಲಿ ಸಿಗರೇಟ್ ಕೂಡಾ ನಿಷೇಧಿಸಿ: ಸಚಿವ್ ಮೀಗಾ ಒತ್ತಾಯ
ಗುಟ್ಕಾ ನಿಷೇಧಿಸಿ ಸಿಗರೇಟ್ ಲಾಬಿಗೆ ಮಣಿದ ಸರಕಾರ: ಆರೋಪ
ಬೆಂಗಳೂರು, ಎ.30: ಎರಡನೇ ಹಂತದ ಲಾಕ್‌ಡೌನ್ ನ ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಮದ್ಯ, ತಂಬಾಕು ಮತ್ತು ಗುಟ್ಕಾ ಮಾರಾಟವನ್ನು ನಿಷೇಧಿಸಿ ಸರಕಾರ ಬುಧವಾರ ಆದೇಶಿಸಿದೆ. ಇದೇ ರೀತಿ ಸಿಗರೇಟ್ ಕೂಡಾ ನಿಷೇಧಿಸಿ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಅವರು, ಬಾಯಿಯಲ್ಲಿ ಇಟ್ಟು ಸೇದುವುದರಿಂದ ಸಿಗರೇಟ್ ತುಂಡಿನಲ್ಲೂ ಎಂಜಲು ಅಂಟಿರುತ್ತದೆ. ಸಿಗರೇಟ್ ಅನ್ನು ಸೇದಿದ ಬಳಿಕ ಅದರ ತುಂಡನ್ನು ಗುಟ್ಕಾ ತರಹ ಅಲ್ಲಿ ಇಲ್ಲಿ ಬಿಸಾಡುತ್ತಾರೆ. ಇದು ಸಹ ಕೊರೋನ ಹರಡದೇ ಎಂದು ಪ್ರಶ್ನಿಸಿರುವ ಸಚಿನ್ ಮೀಗಾ, ಸೇದಿ ಬಿಸಾಡುವ ಸಿಗರೇಟ್ ಮಾದರಿಯನ್ನು ಸಿಎಫ್‌ಟಿಐರ್‌ಐ ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.
ಈ ಹಿಂದಿನಿಂದಲೂ ಅಡಿಕೆ ಆರೋಗ್ಯಕ್ಕೆ ಹಾನಿಕರ, ಅದನ್ನು ತಿನ್ನುವುದನ್ನು ನಿಷೇಧಿಸುವಂತೆ ಸಿಗರೇಟ್ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕಾರಗಳ ಮುಖಾಂತರ ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸುತ್ತಿವೆ. ಗುಟ್ಕಾ ನಿಷೇಧವಾದರೆ ಜನರು ಸಿಗರೇಟ್ ಸೇವನೆಯತ್ತ ಮುಖ ಮಾಡುವ ಸಾಧ್ಯತೆ ಇದೆ. ಇದರಿಂದ ಸಿಗರೇಟ್ ಕಂಪೆನಿಗಳಿಗೆ ಲಕ್ಷಾಂತರ ಕೋಟಿ ರೂ. ಲಾಭವಾಗಲಿದೆ. ಇಂತಹ ಕಾಣದ ಕೈಗಳ ಲಾಬಿಗೆ ಸರಕಾರ ಮಣಿದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದ ಲಕ್ಷಾಂತರ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿರುವ ಸಚಿನ್ ಮೀಗಾ ಈ ಬಗ್ಗೆ ಸರಕಾರ ಗಮನಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.







