ದಿನಸಿ ತರಲು ಮನೆಯಿಂದ ಹೊರಹೋಗಿದ್ದವ ಮದುವೆಯಾಗಿ ಪತ್ನಿಯೊಂದಿಗೆ ವಾಪಸ್ ಬಂದ!
Photo: Twitter(@smitaprakash)
ಗಾಝಿಯಾಬಾದ್, ಎ.30: ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜನರು ಅಗತ್ಯವಸ್ತುಗಳನ್ನು ತರಲು ಮಾತ್ರ ಮನೆಯಿಂದ ಹೊರಹೋಗುತ್ತಿದ್ದಾರೆ. ಆದರೆ ಉತ್ತರಪ್ರದೇಶದ ಗಾಝಿಯಾಬಾದ್ನ ಯುವಕನೊಬ್ಬ ದಿನಸಿ ತರಲು ಮನೆಯಿಂದ ಹೊರಟಿದ್ದ. ಆದರೆ, ಮದುವೆಯಾಗಿ ಪತ್ನಿಯೊಂದಿಗೆ ಮನೆಗೆ ವಾಪಸ್ ಆಗಿದ್ದಾನೆ. ತನ್ನ ಮಗನ ಅವಸರದ ಹಾಗೂ ರಹಸ್ಯ ವಿವಾಹದಿಂದ ಕೆಂಡಾಮಂಡಲವಾದ ಯುವಕನ ತಾಯಿ, ಸೊಸೆಯನ್ನು ಮನೆಯೊಳಗೆ ಕಾಲಿಡಲು ಬಿಡಲಿಲ್ಲ. ಇಷ್ಟಕ್ಕೆ ನಿಲ್ಲದ ಯುವಕನ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ಮಗನ ವಿರುದ್ಧ ದೂರು ನೀಡಿದ್ದಾರೆ.
ಇಂದು ನಾನು ನನ್ನ ಮಗನನ್ನು ದಿನಸಿ ತರಲು ಕಳುಹಿಸಿದ್ದೆ. ಆದರೆ, ಆತ ಮರಳಿ ಮನೆಗೆ ಬಂದಾಗ ತನ್ನ ಪತ್ನಿಯೊಂದಿಗೆ ಬಂದಿದ್ದ. ನಾನು ಈ ಮದುವೆಯನ್ನು ಒಪ್ಪುವುದಿಲ್ಲ ಎಂದು ಕಣ್ಣೀರಿಡುತ್ತಾ ಯುವಕನ ತಾಯಿ ಹೇಳಿದ್ದಾರೆ.
ಯುವಕನ ಮದುವೆ ಎರಡು ತಿಂಗಳ ಹಿಂದೆ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ನಡೆದಿತ್ತು. ಲಾಕ್ಡೌನ್ ಹಿಂಪಡೆದ ಬಳಿಕ ನೂತನ ವಧುವರರು ವಿವಾಹ ಪ್ರಮಾಣಪತ್ರ ಪಡೆಯಲು ನಿರ್ಧರಿಸಿದ್ದಾರೆ.
ಲಾಕ್ಡೌನ್ನಿಂದಾಗಿ ನಮಗೆ ಮದುವೆ ಪ್ರಮಾಣಪತ್ರ ಸ್ವೀಕರಿಸಲಾಗಲಿಲ್ಲ. ನಾನು ಮದುವೆ ನಡೆದಿರುವ ಹರಿದ್ವಾರಕ್ಕೆ ಮತ್ತೊಮ್ಮೆ ತೆರಳುವೆ ಎಂದು 26ರ ಹರೆಯದ ಯುವಕ ಗುಡ್ಡು ಹೇಳಿದ್ದಾನೆ.