ಲಾಕ್‌ಡೌನ್ ಸಮಯ ಕಳೆಯಲು ಗಾಳಿಪಟ ಹಾರಾಟ

ಮಂಗಳೂರು, ಎ.30: ನಗರದಲ್ಲಿ ಕೊರೋನ ಭೀತಿ ಹೆಚ್ಚುತ್ತಿರುವಂತೆಯೇ, ಜನಸಾಮಾನ್ಯರು ಕೈಗಳಿಗೆ ಕೆಲಸವಿಲ್ಲದೆ, ಮನೆಯಿಂದ ಹೊರಬರಲಾಗದೆ ತತ್ತರಿಸುವಂತಾಗಿದೆ. ಮನೆಯವರು ಒಟ್ಟಾಗಿ ಅಡುಗೆ ಮಾಡುವುದು, ಕ್ಯಾರಂ, ಲೂಡೋ ಆಡುವ ಜತೆಗೆ ಇದೀಗ ಸಮಯ ಕಳೆಯಲು ಕೆಲವೆಡೆ ಮನೆ ಮಂದಿ ಗಾಳಿಪಟ ಹಾರಾಟವನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.
ಹಳೆ ಪೇಪರ್ ಅಥವಾ ಬಣ್ಣದ ಪೇಪರ್‌ಗಳನ್ನು ಉಪಯೋಗಿಸಿಕೊಂಡು ಮನೆಯಲ್ಲೇ ಗಾಳಿಪಟ ತಯಾರಿಸಿ ಸಣ್ಣ ಪುಟ್ಟ ಮಕ್ಕಳ ಜತೆ ತಮ್ಮ ಮನೆಯ ತಾರಸಿ ಅಥವಾ ಮನೆಯ ಅಂಗಳದಲ್ಲಿ ಅಥವಾ ಎದುರಿನ ಸಣ್ಣ ಪುಟ್ಟ ಮೈದಾನಗಳಲ್ಲಿ ಗಾಳಿಪಟ ಹಾರಿಸುತ್ತಾ ಸಮಯ ಕಳೆಯುತ್ತಿದ್ದಾರೆ.
ಪುಟ್ಟ ಮಕ್ಕಳ ಜತೆಗೂಡಿ ಮನೆಯ ಹಿರಿಯರ ಜತೆ ಯುವಕ- ಯುವತಿಯರು ಗಾಳಿಪಟ ಹಾರಿಸುವ ಮೂಲಕ ಲಾಕ್‌ಡೌನ್ ಉಂಟಾಗಿರುವ ತೊಂದರೆಗಳನ್ನು ಸ್ವಲ್ಪ ಮಟ್ಟಿಗೆ ಮರೆಯಾಗಿುವ ಪ್ರಯತ್ನ ಇದಾದಂತಿದೆ.
‘‘ಕೊರೋನ ಎಲ್ಲರ ಜನಜೀವನವನ್ನು ಜರ್ಝರಿತಗೊಳಿಸಿದೆ. ಮನೆಯಲ್ಲಿ ಕೂತು ಬೇಜಾರಾಗುತ್ತಿದೆ. ಲಾಕ್‌ಡೌನ್ ಯಾವಾಗ ತೆರವುಗೊಳ್ಳುವುದೋ ತಿಳಿಯದು. ಮಕ್ಕಳಿಗೂ ಕಾಲೇಜು, ಶಾಲೆ ಇಲ್ಲ. ಸಮಯದ ಸದುಪಯೋಗಕ್ಕಾಗಿ, ಮನಸ್ಸನ್ನು ಒಂದಷ್ಟು ರಿಲ್ಯಾಕ್ಸ್ ಮಾಡುವುದಕ್ಕಾಗಿ ಮನೆಯವರು ಸೇರಿ ಗಾಳಿಪಟ ಹಾರಿಸುತ್ತೇವೆ. ಮನೆಯಲ್ಲಿರುವ ಹಳೆ ಪೇಪರ್, ಮಕ್ಕಳ ಬಳಿ ಇದ್ದ ಕಲರ್ ಪೇಪರ್, ದಾರ, ಕಡ್ಡಿಗಳನ್ನು ಬಳಸಿ ಗಾಳಿಪಟ ತಯಾರಿಸಿ ಸಂಜೆ ವೇಳೆಗೆ ಮಕ್ಕಳ ಜತೆ ಗಾಳಿಪಟ ಹಾರಿಸುತ್ತೇವೆ’’ ಎನ್ನುತ್ತಾರೆ ಮೇರಿಹಿಲ್ ನಿವಾಸಿಯೊಬ್ಬರು.







.jpeg)
.jpeg)



