ಕೆ.ಆರ್.ಪುರ: 55 ಬಡ ಕುಟುಂಬಗಳಿಗೆ ದಿನಸಿ ವಿತರಿಸಿ ಮಾನವೀಯತೆ ಮೆರೆದ ಎಸ್ಸೈ ಮಂಜುನಾಥ್

ಬೆಂಗಳೂರು, ಎ.30: ಲಾಕ್‍ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು ಹಾಗೂ ಪೌರ ಕಾರ್ಮಿಕರ 55 ಕುಟುಂಬಗಳಿಗೆ ಕೆ.ಆರ್.ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಚ್.ಮಂಜುನಾಥ್ ತಮ್ಮ ಸ್ವಂತ ಖರ್ಚಿನಿಂದ ಎರಡು ತಿಂಗಳುಗಳಿಗೆ ಆಗುವಷ್ಟು ದಿನಸಿ, ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡವರು, ನಿರ್ಗತಿಕರು ಹಾಗೂ ಪೌರ ಕಾರ್ಮಿಕರ ಬಗ್ಗೆ ಸ್ವತಃ ತಾವೆ ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿ, ತೀವ್ರ ಸಂಕಷ್ಟದಲ್ಲಿರುವಂತಹ 55 ಕುಟುಂಬಗಳನ್ನು ಗುರುತಿಸಿ, ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಿದರು.
ಎಸ್ಸೈ ಮಂಜುನಾಥ್ ಕಾರ್ಯಕ್ಕೆ ಕೆ.ಆರ್.ಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಾಥ್ ನೀಡಿದರು. ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Next Story





