ದೈವಜ್ಞ ಬ್ರಾಹ್ಮಣ ಸಮಾಜದ ಅವಹೇಳನಕ್ಕೆ ಖಂಡನೆ: ದೂರು

ಮಂಗಳೂರು : ರಾಜ್ಯ ಬಿಜೆಪಿ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಲೈವ್‌ನಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರನ್ನು ಆ ಸ್ಥಾನದಿಂದ ತೆರವುಗೊಳಿಸುವಂತೆ ಆಗ್ರಹಿಸಿ ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘದಿಂದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಹಿಂದುಳಿದ ವರ್ಗ 2ಎ ಯಲ್ಲಿ ಸ್ಥಾನ ಪಡೆದಿರುವ ದೈವಜ್ಞ ಬ್ರಾಹ್ಮಣರು ವಿಶ್ವಕರ್ಮ ಸಮಾಜದ ಮುದ್ದೆಯನ್ನು ಕಿತ್ತು ತಿನ್ನುತ್ತಿದ್ದಾರೆ. ಅವರನ್ನು ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿಯಿಂದ ಹೊರ ಹಾಕಬೇಕು ಎಂದು ಹೇಳಿರುವುದಲ್ಲದೆ, ಸಮಾಜದ ಸ್ವಾಮೀಜಿಯವರನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ. ಚಿನ್ನ ಬೆಳ್ಳಿ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆ ವಿರುದ್ಧ ಸ್ವರ್ಣೋಧ್ಯಮ ಕುಲಕಸುಬಾಗಿರುವ ಒಟ್ಟಾಗಿ ಹೋರಾಡುತ್ತಿರುವಾಗ ಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತುವ ಪ್ರಯತ್ನ ನಂಜುಂಡಿ ಅವರಿಂದ ನಡೆದಿದೆ ಎಂದು ದೈವಜ್ಞ ಬ್ರಾಹ್ಮಣ ಸಂಘ ಆರೋಪಿಸಿದೆ.
ಅವರಿಗೆ ನೀಡಿರುವ ಸ್ಥಾನಮಾನಗಳಿಂದ ಅವರನ್ನು ವಜಾಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಸುಧಾಕರ ಶೇಟ್ ಮತ್ತು ಪದಾಧಿಕಾರಿ ರೂಪೇಶ್ ಶೇಟ್ ಅವರು ಸಂಸದರಿಗೆ ಮನವಿ ಸಲ್ಲಿಸಿದರು.





