ರಮಝಾನ್ ನೆಪದಲ್ಲಿ ಜವುಳಿ ಅಂಗಡಿಗಳು ತೆರೆಯಬೇಡಿ : ಮಂಗಳೂರು ಸೆಂಟ್ರಲ್ ಕಮಿಟಿ ಆಗ್ರಹ
ಮಂಗಳೂರು, ಎ.30: ನಿಯಂತ್ರಣದಲ್ಲಿದ್ದ ಮಂಗಳೂರು ನಗರದಲ್ಲಿ ಕೆಲವು ದಿನಗಳಿಂದೀಚೆಗೆ ಕೊರೋನ ಪಾಸಿಟಿವ್ ಪತ್ತೆಯಾಗುತ್ತಿದೆ. ಇದರಿಂದ ನಗರ ಮಾತ್ರವಲ್ಲ, ಜಿಲ್ಲೆಯ ಜನರೂ ಕೂಡ ಆತಂಕಿತರಾಗಿದ್ದಾರೆ. ಈ ಮಧ್ಯೆ ರಮಝಾನ್ ನೆಪದಲ್ಲಿ ಜವುಳಿ ಅಂಗಡಿಗಳನ್ನು ತೆರೆಸಲುಲಾಬಿ ನಡೆಯುತ್ತಿದೆ. ಇದರಿಂದ ‘ಸುರಕ್ಷಿತ ಅಂತರ’ ಕಡಿಮೆಯಾಗಿ ಕೊರೋನ ವೈರಸ್ ರೋಗ ಹೆಚ್ಚುವ ಅಪಾಯವಿದೆ. ಹಾಗಾಗಿ ಯಾವ ಕಾರಣಕ್ಕ್ಕೂ ಜವುಳಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬಾರದು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.
ಪ್ರತೀ ರಮಝಾನ್ ಸಂದರ್ಭ ಈದುಲ್ ಫಿತ್‌ರ್‌ಗೆ ಮುಸ್ಲಿಮರು ಮುಗಿಬಿದ್ದು ಬಟ್ಟೆಬರೆ ಖರೀದಿಸುವುದು ಸಹಜ. ಈ ಬಾರಿ ಮುಗಿಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೊರೋನ ವೈರಸ್ ರೋಗ ತಡೆಗಟ್ಟಲು ಸುರಕ್ಷಿತ ಅಂತರವೊಂದೇ ಮಾರ್ಗ. ಹಾಗಾಗಿ ಜವುಳಿ ಅಂಗಡಿಗಳನ್ನು ತೆರೆದರೆ ಮುಗಿ ಬೀಳುತ್ತಾರೆ. ಅದರಲ್ಲೂ ಮುಸ್ಲಿಂ ಮಹಿಳೆಯರು ಈ ಬಗ್ಗೆ ಜಾಗೃತಿ ವಹಿಸುವ ಸಾಧ್ಯತೆ ತೀರಾ ಕಡಿಮೆ.ಒಂದು ವೇಳೆ ಅವಕಾಶ ಮಾಡಿಕೊಟ್ಟರೆ ಈವರೆಗಿನ ಲಾಕ್‌ಡೌನ್‌ಗೂ ಅರ್ಥವಿಲ್ಲ ಎಂದು ಅವರು ತಿಳಿಸಿದ್ದಾರೆ.







